ಮೈಸೂರು, 19 ಜುಲೈ (ಹಿ.ಸ.) :
ಆ್ಯಂಕರ್ : ನಮ್ಮ ಸರ್ಕಾರ ದೇವರ ಮನೆ ಇದ್ದಂತೆ. ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ. 2028ರ ಚುನಾವಣೆಗೂ ಹೆಚ್ಚು ಶಕ್ತಿ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಜನತೆಗೆ ಕೋರಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ನಗರ ವ್ಯಾಪ್ತಿಯ ₹2,658 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ 'ಕೈ' ರೈತರಿಗೆ, ಮಹಿಳೆಯರಿಗೆ ಶಕ್ತಿ ತುಂಬಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಬರಗಾಲ ಅಂತಿದ್ದರು, ಈಗ ಅವಧಿಗೆ ಮುನ್ನ ಜಲಾಶಯಗಳು ತುಂಬಿವೆ ಎಂದು ಹೇಳಿದರು.
ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಟೀಕಿಸಿತ್ತು, ಆದರೆ ಈಗ ಎಲ್ಲ ರಾಜ್ಯಗಳಲ್ಲೂ ಅದನ್ನೇ ಅನುಸರಿಸುತ್ತಿದೆ. ನಿಂದಕರು ಇರಲಿ, ನಾವಂತೂ ಮುನ್ನೆಡೆಯುತ್ತೇವೆ ಎಂದರು.
2028ರಲ್ಲಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ, ಖರ್ಗೆ ಅವರ ಮಾರ್ಗದರ್ಶನದಲ್ಲಿ ನಾವು ಮತ್ತಷ್ಟು ಬಲಶಾಲಿಯಾಗಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa