
ಬೆಳಗಾವಿ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನಿಂದ ಬೆಳಗಾವಿಗೆ ಬಂದರೂ ಕಾಂಗ್ರೆಸ್ ಪಕ್ಷದ ಒಳಬೇಗುದಿ ತಣ್ಣಗಾಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿರುವ ಅವರು, ಬೂದಿ ಮುಚ್ಚಿದ ಕೆಂಡದಂತಿರುವ ಕಾಂಗ್ರೆಸ್ ಪಕ್ಷದ ಒಳಬೇಗುದಿ ಎಷ್ಟು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಸಿದರೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದಿದ್ದಾರೆ.
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ವೇದಿಕೆಯಾಗಬೇಕಿದ್ದ ಬೆಳಗಾವಿ ಅಧಿವೇಶನ, ಕಾಂಗ್ರೆಸ್ ಪಕ್ಷದ ಕುರ್ಚಿ ಕಿತ್ತಾಟದಲ್ಲಿ ವ್ಯರ್ಥವಾಗುತ್ತಿರುವುದು ವಿಷಾದಕರ.
ಒಂದು ಕಡೆ ಮುಖ್ಯಮಂತ್ರಿ ಅವರ ಪುತ್ರ ಪರಿಷತ್ ಸದಸ್ಯ ಡಾ.ಯತೀಂದ್ರ ಅವರು ತಮ್ಮ ಬಾಲಿಶ ಹೇಳಿಕೆಗಳಿಂದ ಇಡೀ ಅಧಿವೇಶನದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನಕ್ಕೆ ಗೈರು ಹಾಜರಾಗಿ ಹೈದರಾಬಾದಿನಲ್ಲಿ ತೆಲಂಗಾಣ ಸರ್ಕಾರದ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ತಮ್ಮ ಮುನಿಸು ಪ್ರದರ್ಶನ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನ ನಂಬಿ ಅಧಿಕಾರ ಕೊಟ್ಟ ತಪ್ಪಿಗೆ ಕನ್ನಡಿಗರು ದಿನನಿತ್ಯ ಪಶ್ಚಾತಾಪ ಪಡುವುದಂತೂ ಅನಿವಾರ್ಯವಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa