
ನವದೆಹಲಿ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆ ಕಣವು ನಿರ್ಣಾಯಕ ಹಂತವನ್ನು ತಲುಪುತ್ತಿದ್ದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ತೇಜಸ್ವಿ ಯಾದವ್, ನಿತೀಶ್ ಕುಮಾರ್, ಪ್ರಶಾಂತ್ ಕಿಶೋರ್ ಮತ್ತು ನಕ್ಸಲಿಸಂ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸ್ಪಷ್ಟ ನಿಲುವು ತಳೆದಿದ್ದಾರೆ.
ಸುದ್ದಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಅವರು, “ಜಂಗಲ್ ರಾಜ್ ತನ್ನ ಮುಖ ಮತ್ತು ವೇಷ ಬದಲಾಯಿಸಿಕೊಂಡು ಮರಳಲು ಬಯಸುತ್ತಿದೆ” ಎಂದು ಹೇಳಿ, ಬಿಹಾರದ ಜನರು ಎಚ್ಚರಿಕೆಯಿಂದ ಇರಬೇಕು. “ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯ ಮತ್ತೆ ಕತ್ತಲೆಯತ್ತ ಮರಳುತ್ತದೆ” ಎಂದು ಶಾ ಎಚ್ಚರಿಸಿದರು.
ನಿತೀಶ್ ಎನ್‌ಡಿಎಯ ಅಚಲ ಮುಖ
ಎನ್‌ಡಿಎ ಒಳಗಿನ ನಾಯಕತ್ವದ ಕುರಿತ ಊಹಾಪೋಹಗಳನ್ನು ತಳ್ಳಿ ಹಾಕುತ್ತಾ ಶಾ ಹೇಳಿದರು: “ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ, ಅವರ ನೇತೃತ್ವದಲ್ಲಿ ನಾವು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಇಲ್ಲಿ ಯಾವುದೇ ಗೊಂದಲವಿಲ್ಲ.”
ಪ್ರತಿ ಚುನಾವಣೆಯಲ್ಲೂ ಕೆಲವರು “ಏಕನಾಥ್ ಶಿಂಧೆ” ಹುಡುಕುತ್ತಾರೆ, ಆದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ನಾಯಕತ್ವ ಅಚಲವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
“ತೇಜಸ್ವಿಯ ಭರವಸೆಗಳು ಅಪ್ರಾಯೋಗಿಕ”
ತೇಜಸ್ವಿ ಯಾದವ್ ಅವರ 10 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆಯನ್ನು ಶಾ ವಾಸ್ತವಾಧಾರವಿಲ್ಲದ ಮಾತು ಎಂದು ಕರೆದರು.
“ಇದನ್ನು ಸಾಧಿಸಲು ಬಿಹಾರದ ಬಜೆಟ್ ನಾಲ್ಕು ಪಟ್ಟು ಹೆಚ್ಚಿಸಬೇಕಾಗುತ್ತದೆ. 12.5 ಲಕ್ಷ ಕೋಟಿ ರೂಪಾಯಿಗಳು ಎಲ್ಲಿಂದ ಬರುತ್ತವೆ?” ಎಂದು ಪ್ರಶ್ನಿಸಿದರು.
ಬಿಜೆಪಿಯು ಮಹಿಳೆಯರಿಗೆ ನೀಡಿದ ಯೋಜನೆಗಳು “ಮತ ಖರೀದಿಯ ಪ್ರಯತ್ನವಲ್ಲ, ಸ್ವಾವಲಂಬನೆಗೆ ಮಾರ್ಗಸೂಚಿ” ಎಂದು ಶಾ ಹೇಳಿದರು. “ನಾವು ‘ಲಕ್ಷಪತಿ ದೀದಿ’ಗಳನ್ನು ರೂಪಿಸುವ ಗುರಿಯನ್ನು ಹೊಂದಿದ್ದೇವೆ” ಎಂದರು.
ಸ್ವ-ಉದ್ಯೋಗದಿಂದ ವಲಸೆಗೆ ತಡೆ
ವಲಸೆಯ ಸಮಸ್ಯೆಯನ್ನು ಉಲ್ಲೇಖಿಸಿದ ಶಾ “ಬಿಹಾರದ ಯುವಕರು ತಮ್ಮ ಗ್ರಾಮದಲ್ಲೇ ತಿಂಗಳಿಗೆ 25,000 ರೂಪಾಯಿ ಗಳಿಸಬಹುದಾದರೆ, ಅವರು ಮುಂಬೈ ಅಥವಾ ಕೇರಳಕ್ಕೆ ಹೋಗುವುದಿಲ್ಲ.”
ಪ್ರತಿ ಪಂಚಾಯತ್‌ನಲ್ಲಿ ಸಣ್ಣ ಕೈಗಾರಿಕೆಗಳು ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ನೀಲನಕ್ಷೆ ರೂಪಿಸಿದೆ ಎಂದು ಅವರು ತಿಳಿಸಿದರು.
ಜಂಗಲ್ ರಾಜ್‌ನ ಡಿಎನ್‌ಎ ಬದಲಾಗಿಲ್ಲ
ತೇಜಸ್ವಿ ಯಾದವ್ ವಿರುದ್ಧ ತೀವ್ರ ಟೀಕೆ ನಡೆಸಿದ ಶಾ, “ತೇಜಸ್ವಿ ಮುಖವಾಗಿರಬಹುದು, ಆದರೆ ನಿಯಂತ್ರಣ ಲಾಲು ಯಾದವ್ ಅವರ ಕೈಯಲ್ಲಿದೆ. 17 ತಿಂಗಳ ಅವರ ಸರ್ಕಾರದಲ್ಲಿ ನಿತೀಶ್ ಮುಖ್ಯಮಂತ್ರಿಯಾಗಿದ್ದರೂ ಅಧಿಕಾರ ತೇಜಸ್ವಿಯವರಲ್ಲಿತ್ತು” ಎಂದು ಹೇಳಿದರು. ಜಂಗಲ್ ರಾಜ್‌ನ ಡಿಎನ್‌ಎ ಒಂದೇ, ಮುಖ ಮಾತ್ರ ಬದಲಾಗಿದೆ” ಎಂದು ಶಾ ವ್ಯಂಗ್ಯವಾಡಿದರು.
ಪ್ರಶಾಂತ್ ಕಿಶೋರ್ ಕುರಿತ ಟೀಕೆ
“ದೇಶದಲ್ಲಿ ಈಗಾಗಲೇ 1,550 ಪಕ್ಷಗಳಿವೆ, 1,551ನೇ ಪಕ್ಷವನ್ನು ಅವರು ರಚಿಸಿದ್ದಾರೆ. ಅದರಲ್ಲಿ ನಮಗೆ ಚಿಂತೆ ಇಲ್ಲ” ಎಂದು ಶಾ ಪ್ರತಿಕ್ರಿಯಿಸಿದರು.
ಎನ್‌ಡಿಎ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.
೨೦೨೬ರೊಳಗೆ ನಕ್ಸಲಿಸಂ ನಿರ್ಮೂಲನೆ
130 ಜಿಲ್ಲೆಗಳಲ್ಲಿ ಹರಡಿದ್ದ ನಕ್ಸಲಿಸಂ ಈಗ ಕೇವಲ 11 ಜಿಲ್ಲೆಗಳಿಗೆ ಸೀಮಿತವಾಗಿದೆ. 2026ರ ಮಾರ್ಚ್‌ವರೆಗೂ ಇದನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗುತ್ತದೆ.”
ಹಿಡ್ಮಾ, ಗಣಪತಿ ಮತ್ತು ದೇವೋಜಿ ಎಂಬ ಮೂವರು ಪ್ರಮುಖ ನಕ್ಸಲರು ಮಾತ್ರ ಉಳಿದಿದ್ದಾರೆ ಎಂದು ಅವರು ವಿವರಿಸಿದರು.
“ಭಾರತ ಧರ್ಮಶಾಲೆಯಲ್ಲ”
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 3.5 ಮಿಲಿಯನ್ ಹೆಸರುಗಳನ್ನು ತೆಗೆದುಹಾಕಲಾಗಿದೆ, ಬಹುಪಾಲು ಒಳನುಸುಳುವವರೇ.”
“ಒಳನುಸುಳುವಿಕೆಯನ್ನು ತಡೆಹಿಡಿಯುವುದು ಚುನಾವಣಾ ವಿಷಯವಲ್ಲ, ಅದು ರಾಷ್ಟ್ರಭದ್ರತೆ. ಭಾರತ ಧರ್ಮಶಾಲೆಯಲ್ಲ; ನಾವು ಒಳನುಸುಳುವವರನ್ನು ಹೊರಹಾಕುತ್ತೇವೆ.” ಎಂದು ಶಾ ಸ್ಪಷ್ಟ ಸಂದೇಶ ನೀಡಿದರು.
ಕೈಗಾರಿಕೀಕರಣ ಮತ್ತು ಉದ್ಯಮಾಭಿವೃದ್ಧಿ
ಬಿಹಾರದಲ್ಲಿ ಕೈಗಾರಿಕಾ ಬೆಳವಣಿಗೆಯ ಕುರಿತು ಮಾತನಾಡಿದ ಶಾ, ಬರೌನಿ ರಿಫೈನರಿ ಕಾರ್ಯಾರಂಭಗೊಂಡಿದ್ದು, ಎಥೆನಾಲ್ ಉತ್ಪಾದನೆಯಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದೆ ಎಂದರು.
ಪಿಎಂ ಮಿತ್ರ ಪಾರ್ಕ್‌ಗಳು ರಾಜ್ಯಕ್ಕೆ ಹೊಸ ಗುರುತನ್ನು ನೀಡುತ್ತಿವೆ ಎಂದು ಅವರು ಹೇಳಿದರು.
ಮಾದಕ ವಸ್ತುಗಳ ವಿರುದ್ಧ ನಕ್ಸಲ್ ಮಾದರಿಯ ಕ್ರಮ
ಮಾದಕ ವಸ್ತು ವ್ಯಾಪಾರಿಗಳ ವಿರುದ್ಧ ಕಠಿಣ ತಂತ್ರ ಅನುಸರಿಸಲಾಗುತ್ತಿದೆ ಎಂದು ಶಾ ಹೇಳಿದರು. “ಕಾರ್ಟೆಲ್‌ಗಳನ್ನು ಕಿತ್ತುಹಾಕುವ ಮೂಲಕ ಈ ಜಾಲಗಳ ಅಂತ್ಯಗೊಳಿಸುತ್ತೇವೆ” ಎಂದರು.
“ನಾಯಕರು ಜನರಿಂದ ಹುಟ್ಟುತ್ತಾರೆ”
“ಬಿಜೆಪಿ ನಾಯಕರನ್ನು ರೂಪಿಸುವುದಿಲ್ಲ, ಸಾರ್ವಜನಿಕರು ರೂಪಿಸುತ್ತಾರೆ. ಮುಂದಿನ ಪೀಳಿಗೆಯ ನಾಯಕತ್ವ ಜನರ ಕೈಯಲ್ಲಿದೆ” ಎಂದು ಶಾ ಹೇಳಿದರು.
“ನಮ್ಮ ಗುರಿ ಅಧಿಕಾರವಲ್ಲ, ಜನಸಂಪರ್ಕ”
ಚುನಾವಣೆಗಳು ಕೇವಲ ಅಧಿಕಾರ ಪಡೆಯುವ ಮಾರ್ಗವಲ್ಲ, ಜನರನ್ನು ಒಟ್ಟುಗೂಡಿಸುವ ಅವಕಾಶ. ಬಿಹಾರದ ಜನರು ಅಭಿವೃದ್ಧಿಯ ರಾಜಕೀಯವನ್ನು ಆರಿಸುತ್ತಾರೆ, ಈ ಬಾರಿಯೂ ಹಾಗೆಯೇ ನಡೆಯುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa