
ಕಠ್ಮಂಡು, 02 ನವೆಂಬರ್ (ಹಿ.ಸ.) :
ಆ್ಯಂಕರ್ : ನೇಪಾಳದ ಉತ್ತರ ಭಾಗದ ಪರ್ವತ ಪ್ರದೇಶ ಅಪ್ಪರ್ ಮುಸ್ತಾಂಗ್‌ನಲ್ಲಿ ಭಾರೀ ಹಿಮಪಾತ ಮತ್ತು ಭೂಕುಸಿತಗಳಿಂದಾಗಿ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಭಾರತ ಸೇರಿದಂತೆ ಹಲವು ದೇಶಗಳ 550 ಕ್ಕೂ ಹೆಚ್ಚು ಪ್ರವಾಸಿಗರು ಮತ್ತು 100 ಕ್ಕೂ ಹೆಚ್ಚು ವಾಹನಗಳು ಅಲ್ಲಿ ಸಿಲುಕಿಕೊಂಡಿವೆ.
ಭಾರಿ ಮಳೆ ಮತ್ತು ಹಿಮಪಾತದ ಪರಿಣಾಮವಾಗಿ ಜೋಮ್ಸಮ್–ಕೋರ್ಲಾ ಮಾರ್ಗದಲ್ಲಿ ಅನೇಕ ಭೂಕುಸಿತಗಳು ಸಂಭವಿಸಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬಾಗ್ಬೇನಿಯಿಂದ ಚುಸಾಂಗ್ ಪ್ರದೇಶದವರೆಗೆ ರಸ್ತೆ, ವಿದ್ಯುತ್ ಮತ್ತು ಇಂಟರ್ನೆಟ್ ಸೇವೆಗಳು ಸಂಪೂರ್ಣವಾಗಿ ವ್ಯತ್ಯಯಗೊಂಡಿವೆ.
ಈ ಕುರಿತು ಮುಸ್ತಾಂಗ್ ಜಿಲ್ಲಾ ಪೊಲೀಸ್ ಅಧಿಕಾರಿ ಡಿಎಸ್‌ಪಿ ತ್ಸೆರಿಂಗ್ ಕಿಪ್ಪಾ ಲಾಮಾ ಮಾಹಿತಿ ನೀಡಿದ್ದು, “ಚುಸರ್ ಪ್ರದೇಶದಲ್ಲಿ ೬ಕ್ಕೂ ಹೆಚ್ಚು ದೊಡ್ಡ ಭೂಕುಸಿತಗಳು ಸಂಭವಿಸಿದ್ದರಿಂದ ಜೆಸಿಬಿ ಯಂತ್ರಗಳ ಸಹಾಯದಿಂದ ತೆರವು ಕಾರ್ಯ ಆರಂಭವಾಗಿದೆ. ಆದರೆ ರಸ್ತೆ ಸಂಪೂರ್ಣ ತೆರೆಯಲು ಇನ್ನೂ ಹಲವಾರು ದಿನಗಳು ಬೇಕಾಗಲಿದೆ,” ಎಂದು ಹೇಳಿದ್ದಾರೆ.
ಮುಖ್ಯ ಜಿಲ್ಲಾ ಅಧಿಕಾರಿ ಬಿಷ್ಣು ಪ್ರಸಾದ್ ಭೂಸಲ್ ಅವರು, “ಅಪ್ಪರ್ ಮುಸ್ತಾಂಗ್‌ನಲ್ಲಿ ಒಟ್ಟು 559 ಪ್ರವಾಸಿಗರು ಮತ್ತು 108 ವಾಹನಗಳು ಸಿಲುಕಿಕೊಂಡಿವೆ. ಹವಾಮಾನ ಮತ್ತು ರಸ್ತೆ ಪರಿಸ್ಥಿತಿ ಸುಧಾರಿಸಲು ಕನಿಷ್ಠ ಮೂರು ದಿನಗಳು ಬೇಕಾಗಬಹುದು,” ಎಂದು ತಿಳಿಸಿದ್ದಾರೆ.
ಸಿಲುಕಿಕೊಂಡಿರುವ ಪ್ರವಾಸಿಗರಲ್ಲಿ ಹೆಚ್ಚಿನವರು ಭಾರತ ಮತ್ತು ಇತರ ದೇಶಗಳಿಂದ ಬಂದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಹೋಟೆಲ್‌ಗಳು ಮತ್ತು ಮನೆಗಳಲ್ಲಿ ಅವರು ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa