
ಬೆಂಗಳೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಬರಬೇಕು. ಇದಕ್ಕಾಗಿ ಮಹಿಳಾ ಉದ್ಯಮಿಗಳಿಗೆ ಸಿಐಐ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹಿಳೆಯರ ಕಾರ್ಯಕ್ಷೇತ್ರದ ಕುರಿತು ನಡೆದ 4ನೇ ಸಿಐಐ ಸಮ್ಮೇಳನದಲ್ಲಿ ಮಾತನಾಡಿದ ಸಚಿವರು, ಮಹಿಳಾ ಉದ್ಯಮಿಗಳಿಗೆ ಯಾವ ರೀತಿ ಪ್ರೋತ್ಸಾಹ, ಪ್ರಚಾರ ನೀಡಬಹುದು. ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ನಮ್ಮ ಇಲಾಖೆ ವತಿಯಿಂದ ತೆಗೆದುಕೊಂಡು ಬರಲಾಗಿದೆ ಎಂದರು.
ಈ ಹಿಂದೆ ಗಂಡ ಉದ್ಯಮಿಯಾಗಿದ್ದರೆ, ಅವರಿಗೆ ಹೆಂಡತಿ ಸಹಾಯ ಮಾಡುವ ಪದ್ದತಿ ಇತ್ತು. ಆದರೆ, ಇವತ್ತು ಪರಿಸ್ಥಿತಿ ಬದಲಾಗಿದೆ. ಮಹಿಳೆಯರೇ ಉದ್ಯಮಿಗಳಾಗುತ್ತಿದ್ದಾರೆ. ಮಹಿಳೆಯರು ಇವತ್ತು ಅಷ್ಟೊಂದು ಧೈರ್ಯವಂತ, ಶಕ್ತಿವಂತರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಬೆಳೆಯುತ್ತಿರುವ ಮಧ್ಯೆ, ಮಹಿಳಾ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಇದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.
ನಾನು ಕೂಡ ಎರಡು ಕಾರ್ಖಾನೆ ಮಾಲಕಿಯಾಗಿದ್ದು, ಮಹಿಳಾ ಉದ್ಯಮಿಗಳ ಕಷ್ಟಗಳನ್ನು ಅರಿತಿದ್ದೇನೆ. ಬ್ಯಾಂಕ್ ಬ್ಯಾಲೆನ್ಸ್ ಇದ್ದರಷ್ಟೇ ನಮಗೆ ಬ್ಯಾಂಕ್ ಗಳಲ್ಲಿ ಸಾಲ ಕೊಡುತ್ತಾರೆ. ನಮಗೆ ಬೇಕಿರುವುದು ಧೈರ್ಯ ಒಂದೇ. ಧೈರ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa