
ಗದಗ, 14 ನವೆಂಬರ್ (ಹಿ.ಸ.)
ಆ್ಯಂಕರ್ : ಸಾಲು ಸಾಲು ಮರಗಳನ್ನು ನೆಟ್ಟು ಅಮರಳಾದ ತಿಮ್ಮಕ್ಕ ಪರಿಸರದ ಬಗ್ಗೆ ಹೊಂದಿದ್ದ ಕಾಳಜಿ ಅವಿಸ್ಮರಣೀಯ. ವನದೇವತೆ ಎಂಬ ಖ್ಯಾತಿ ಪಡೆದು ಪರಿಸರ ಪ್ರೇಮಿಗಳಿಗೆಲ್ಲ ಮಾದರಿಯಾಗಿದ್ದ ಅವಳು ಇಂದು ನಮ್ಮನ್ನು ಅಗಲಿರುವುದು ನೋವಿನ ಸಂಗತಿ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶ್ರೀಗಳು ಗಿಡಮರಗಳನ್ನು ಮಕ್ಕಳಂತೆ ಸಾಕಿ ಸಲುಹಿದ ತಿಮ್ಮಕ್ಕ ವೃಕ್ಷಮಾತೆ ಎಂದೇ ಚಿರಪರಿಚಿತಳು. ಗಿಡಮರಗಳ ಮಹತ್ವವನ್ನು ತಿಳಿಸುತ್ತ ಪರಿಸರ ಜಾಗೃತಿಗಾಗಿ ಅಹರ್ನಿಶಿ ಶ್ರಮಿಸಿದ ಅವಳು ದಂತಕತೆಯಾಗಿದ್ದಾಳೆ. ಪದ್ಮ ಪ್ರಶಸ್ತಿ ವಿಭೂಷಿತಳಾಗಿ, ಕರ್ನಾಟಕದ ಹಿರಿಮೆ-ಗರಿಮೆಗೆ ಕಾರಣಳಾಗಿದ್ದ ಅವಳ ಆಶೋತ್ತರಗಳನ್ನು ಕರ್ನಾಟಕ ಸರಕಾರ ಈಡೇರಿಸುವ ಮೂಲಕ ತಿಮ್ಮಕ್ಕನಿಗೆ ಗೌರವ ಸಲ್ಲಿಸಬೇಕು ಮತ್ತು ಅವಳ ಆತ್ಮಕ್ಕೆ ದೇವರು ಚಿರಶಾಂತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP