
ಕೊಪ್ಪಳ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾಂಗ್ರೆಸ್ ಸರಕಾರ ಮಹಿಳೆಯರ ಘನತೆ ಎತ್ತಿ ಹಿಡಿಯುವ ಋತುಚಕ್ರದ ವೇತನಸಹಿತ ರಜೆ ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಅದರ ಬಗ್ಗೆ ಅಧಿಕಾರಿ ವರ್ಗ ಅಸಡ್ಡೆ ತೋರಿಸಬಾರದು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದ್ದಾರೆ.
ರಾಜ್ಯದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನೊಳಗೊಂಡ ಸಂಪುಟ ಸಚಿವರು ಮಹಿಳೆಯರ ವಿಚಾರವಾಗಿ ಅನೇಕ ಪ್ರಗತಿಪರ, ಜೀವಪರ ಆಲೋಚನೆ ಮಾಡುತ್ತಿದ್ದು ಈಗಾಗಲೇ ಗ್ಯಾರಂಟಿ ಮೂಲಕ ಕೋಟ್ಯಾಂತರ ಜನರ ಬದುಕು ನಡೆಯುತ್ತಿದೆ, ಅದರ ಜೊತೆಗೆ ಮಹಿಳೆ ಮುಟ್ಟಾದಾಗ ಅನುಭವಿಸುವ ಯಾತನೆ ಮತ್ತು ಸಂಕಟಕ್ಕೆ ಸ್ಪಂದಿಸಿ ಸರಕಾರಿ, ಅರೆಸರಕಾರಿ ಮತ್ತು ಸ್ವಾಯತ್ತ ಸಂಸ್ಥೆಗಳ ಮಹಿಳಾ ನೌಕರರಿಗೆ ಕೊಟ್ಟ ಸೌಲಭ್ಯವನ್ನು ಈಗ ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ನೊಂದಾಯಿಸಿದ ಎಲ್ಲಾ ಕಾರ್ಖಾನೆ, ಅಂಗಡಿ, ಮಾಲ್ ಸೇರಿ ಎಲ್ಲಾ ಕಡೆಗಳಲ್ಲಿ ವೇತನ ಸಹಿತ ತಿಂಗಳಿಗೆ ಒಂದು ದಿನದಂತೆ ಒಟ್ಟು ವಾರ್ಷಿಕ 12 ದಿನ ವೇತನಸಹಿತ ರಜೆ ನೀಡಲಾಗಿದೆ.
ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ಸರಕಾರ ಆದೇಶದಲ್ಲಿ ಸೂಚಿಸಿದ್ದು, ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ಸಂಸ್ಥೆಗಳ ಮುಖ್ಯಸ್ಥರು ಯಾವುದೇ ರೀತಿಯ ಅಸಡ್ಡೆ ತೋರದೆ ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡದೇ ಸಹಕರಿಸಬೇಕು ಎಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ, ಜೊತೆಗೆ ಇಂತಹ ಮಹತ್ವದ ಹೆಜ್ಜೆ ಇಟ್ಟಿದ್ದಕ್ಕೆ ಅದನ್ನು ಕಾಯ್ದೆ ಮೂಲಕ ಜಾರಿಗೆ ತಂದಿದ್ದಕ್ಕೆ ರಾಜ್ಯ ಸರಕಾರದ ಸಿಎಂ, ಡಿಸಿಎಂ ಸೇರಿ ಮಂತ್ರಿ ಮಂಡಲ ಮತ್ತು ರಾಜ್ಯ ಸರಕಾರದ ಪ್ರಮುಖ ಅಧಿಕಾರಿಗಳಿಗೆ ಧನ್ಯತಾ ಪತ್ರ ಬರೆದಿದ್ದಾಗಿ ಜ್ಯೋತಿ ಗೊಂಡಬಾಳ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್