
ರಾಯಚೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಭಾಷೆ, ಸಂಸ್ಕೃತಿ ಅಭಿವೃದ್ಧಿಯಾಗಬೇಕು. ಜಾಗತೀಕರಣದ ನಂತರ ಕನ್ನಡ ಭಾಷೆ ಅಪಾಯದಂಚಿನಲ್ಲಿದೆ. ಬದುಕು ಕೊಡುವ ಭಾಷೆ ಉಳಿಯುತ್ತದೆ, ಬದುಕು ಕೇಳುವ ಭಾಷೆ ಅಳಿಯುತ್ತದೆ. ಭಾಷೆ ಉಳಿಯಲು ಬದುಕು ಕಟ್ಟಿಕೊಡಬೇಕು ಎಂದು ಬೆಂಗಳೂರಿನ ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಅವರು ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ: ನಿನ್ನೆ-ಇಂದು-ನಾಳೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಈ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾವಂತರಾಗಬೇಕು. ಜಾತಿಗಳು, ಧರ್ಮಗಳು, ಮೂಡನಂಬಿಕೆಗಳು ಹೆಚ್ಚಾಗುತ್ತಿವೆ ಇದರಿಂದ ಕನ್ನಡ ಭಾಷೆ, ಮೀಸಲಾತಿ, ಸ್ಥಳೀಯತೆಗೆ ಅರ್ಥವಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ, ವಸ್ತುಗಳಿಗೆ ಮಾರುಹೋಗದೆ ನಮ್ಮ ಕನ್ನಡ ಭಾಗದ ಸಂಸ್ಕೃತಿ, ಭಾಷೆ, ಆಚರಣೆಗಳು, ಹೊಸ ಆಲೋಚನೆಗಳು, ಚಿಂತನೆಗಳು, ನಾಡು-ನುಡಿ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆಯ ಶಿಕ್ಷಣವನ್ನು ಉನ್ನತ ಮಟ್ಟಕ್ಕೇರಿಸಲು ಪಣತೊಟ್ಟಾಗ ಮಾತ್ರ ಕರ್ನಾಟಕ ರಾಜ್ಯೊತ್ಸವಕ್ಕೆ ಅರ್ಥ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ವಿವಿಯ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಇಲ್ಲಿಯ ಸ್ಥಳೀಯ ಚರಿತ್ರೆ, ಪ್ರಾದೇಶಿಕತೆ, ರೈತರ ಸಮಸ್ಯೆಗಳು, ಕನ್ನಡದ ಬಿಕ್ಕಟ್ಟುಗಳು ಯಾವ ಸ್ಥಿತಿಯಲ್ಲಿವೆ, ಕನ್ನಡ ಭಾಷೆ ಏನಾಗುತ್ತಿದೆ, ಅಭಿವೃದ್ಧಿಯ ನೆಲೆಯೊಳಗೆ ಆರ್ಥಿಕಮಟ್ಟ ಹೇಗಿದೆ, ಅದನ್ನು ಅರಿತು ಆಡಳಿತಾತ್ಮಕ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕಂಡುಕೊಂಡು ಕನ್ನಡದ ಅಭಿಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಭಾಷೆ ಸ್ಥಳೀಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ.
ಇತಿಹಾಸ ಪರಂಪರೆ ಅವಲೋಕನ ಮಾಡಿದಾಗ ಸಂಸ್ಕøತದಂತಹ ಪರಂಪರೆಗೆ ಸೆಡ್ಡುಹೊಡೆದು ಪರ್ಯಾಯವಾಗಿರುವಂತಹ ದೇಶಿಯ ನೆಲೆಗಟ್ಟಿನ ಶಿಸ್ತು ಅಳವಡಿಸಿಕೊಂಡು ನಮ್ಮದೇ ಆದಂತಹ ಲೋಕದೃಷ್ಟಿಗಳು, ಜ್ಞಾನಶಿಸ್ತುಗಳು, ತಿಳುವಳಿಕೆಗಳಿವೆ ಎಂಬುದನ್ನು ಕಟ್ಟಿಕೊಟ್ಟಿದ್ದು ಕನ್ನಡ ಭಾಷೆ. ಕನ್ನಡ ಕಲಿತು ಕನ್ನಡ ಭಾಷೆ ಮಾತನಾಡುವ ಕನ್ನಡ ಪರಿಸರವನ್ನು ಸೃಷ್ಠಿಸುವ ಪ್ರಜ್ಞೆ ನಮ್ಮೊಳಗೆ ಬರಬೇಕು. ಕನ್ನಡ ಭಾಷೆಯ ಮೇಲೆ ಪ್ರೀತಿ, ಅಭಿಮಾನ ಇದ್ದರೆ ಖಂಡಿತವಾಗಿ ಕನ್ನಡ ನಾಶವಾಗುವುದಿಲ್ಲ. ಆತ್ಮಾಭಿಮಾನದಿಂದ ಅದನ್ನು ಬದುಕಿನೊಳಗೆ ಅಳವಡಿಸಿಕೊಂಡು ಕನ್ನಡ ಉಳಿಸಿಕೊಂಡು ಹೋಗುವ ಪ್ರತಿಜ್ಞೆ ಮತ್ತು ಮನಸ್ಥಿತಿಯನ್ನು ಹೊಂದಬೇಕು ಎಂದು ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕುಲಸಚಿವರಾದ ಡಾ.ಎ.ಚನ್ನಪ್ಪ. (ಕೆ.ಎ.ಎಸ್.). ಅವರು ಮಾತನಾಡಿ, ಕನ್ನಡ ಸಂಸ್ಕೃತಿ ಉಳಿಸಿ ಅಭಿವೃದ್ಧಿ ಪತದತ್ತ ಸಾಗಬೇಕಾಗಿದೆ. ಇಡೀ ಜಗತ್ತನ್ನೇ ಮೆಚ್ಚಿಸುವ ಕರ್ನಾಟಕದ ಬೆಂಗಳೂರಿನಲ್ಲಿ ಕನ್ನಡ ಭಾಷೆ ನಾಪತ್ತೆಯಾಗುತ್ತಿದ್ದು, ಬಹುಭಾಷಿಕ ನಗರವಾಗಿ ಕರೆಸಿಕೊಳ್ಳುತ್ತಿದೆ. ಕನ್ನಡ ನಾಡು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತಿದ್ದು ಅದರ ಜೊತೆಗೆ ನಮ್ಮತನವನ್ನು ಕನ್ನಡತನವನ್ನು ಉಳಿಸಿಕೊಂಡು ಹೋಗಬೇಕಾಗಿದೆ ವಿಶ್ವದ ವಿಚಾರಗಳನ್ನು ಹಂಚುವ ವೇದಿಕೆಯಾದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಜ್ಞಾನಾರ್ಜನೆ ಹೊಂದುವ ಜೊತೆಗೆ ತಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಾಗಲಿ ಎಂದು ನುಡಿದರು.
ಸಿಂಡಿಕೇಟ್ ಸದಸ್ಯರಾದ ಜೀಶಾನ್ ಆಖಿಲ್ ಸಿದ್ದಿಖಿ ಅವರು ಮಾತನಾಡಿ, ಪ್ರಸ್ತುತ ಅಳಿವಿನಂಚಿನಲ್ಲಿರುವ ಕನ್ನಡ ಭಾಷೆ ಉಳಿಸಲು ಯುವಕರು ವಿದ್ಯಾರ್ಥಿಗಳು ಮುಂದೆ ಬರಬೇಕು. ವಿವಿಯ ಆವರಣದಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡಬೇಕು, ಕನ್ನಡ ಭಾಷೆ ಉಳಿಸುವ ಬೆಳೆಸುವ ಮಹತ್ತರ ಕೆಲಸವಾಗಬೇಕಾಗಿದೆ ಎಂದು ಅತಿಥಿ ನುಡಿಗಳನ್ನಾಡಿದರು.
ಉಪ ಕುಲಸಚಿವರಾದ ಡಾ.ಕೆ.ವೆಂಕಟೇಶ್ ಸ್ವಾಗತಿಸಿ ಮಾತನಾಡಿ ಕನ್ನಡ ಭಾಷೆ ನಮ್ಮೆಲ್ಲರ ಭಾವಕೋಶದ ಭಾಗ. ಭಾವನೆಗಳನ್ನು ಹೊರಹಾಕಲು ತಾಯ್ನುಡಿ ಬಹು ಹಿತ. ಹರಿದು ಹಂಚಿಹೊಗಿದ್ದ ಕನ್ನಡವನ್ನು ಒಂದುಗೂಡಿಸಲು ಅನೇಕ ಮಹನೀಯರು, ಹೋರಾಟಗಾರರು, ಕವಿಗಳು, ಲೇಖಕರು, ದಾರ್ಶನಿಕರು, ಚಿಂತಕರು, ಕನ್ನಡೇತರರು ಶ್ರಮಿಸಿದವರನ್ನು ನಾವಿಂದು ಸ್ಮರಿಸಬೇಕಾಗಿದೆ ಎಂದು ಪ್ರಾಸ್ತಾವಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಡಾ.ಸುಯಮೀಂದ್ರ ಕುಲಕರ್ಣಿ, ಸಿಂಡಿಕೇಟ್ ಸದಸ್ಯರಾದ ಚಂದ್ರಶೇಖರ್ ಲಿಂಗಣ್ಣ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ನಿಕಾಯಗಳ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಗಣಿತ ವಿಭಾಗದ ವಿದ್ಯಾರ್ಥಿನಿ ರೂಪಶ್ರೀ ಪ್ರಾರ್ಥಿಸಿದರು, ಅತಿಥಿ ಉಪನ್ಯಾಸಕರಾದ ಕನ್ನಡ ಅಧ್ಯಯನ ವಿಭಾಗದ ಡಾ.ಶಿವರಾಜ ಯತಗಲ್ ನಿರೂಪಿಸಿದರು, ಸಮಾಜಕಾರ್ಯ ವಿಭಾಗದ ಬಜಾರಪ್ಪ ಅತಿಥಿಯನ್ನು ಪರಿಚಯಿಸಿದರು, ಪ್ರಾಣಿಶಾಸ್ತ್ರ ವಿಭಾಗದ ಮಹೇಂದ್ರರೆಡ್ಡಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್