
ರಾಯಚೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ದೇವದಾಸಿ ಪದ್ಧತಿ ನಿರ್ಮೂಲನೆ ವಿಷಯದ ಕುರಿತಂತೆ, ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘ, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ಶಿಬಿರ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮವು ನಾಳೆ ಬೆಳಿಗ್ಗೆ 9.30ಕ್ಕೆ ನಗರದ ಪಂಡಿತ ಶ್ರೀ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ರಾಯಚೂರು ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಗೌರವಾನ್ವಿತ ಎಂ.ಜಿ. ಶುಕುರೆ ಕಮಲ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀಮತಿ ನ್ಯಾಯಮೂರ್ತಿ ಅನು ಸಿವರಾಮನ್ ಅವರು ಉಪಸ್ಥಿತಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ರಾಯಚೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾರುತಿ ಬಾಗಡೆ, ಕರ್ನಾಟಕ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾಧಿಕಾರಿ ನಿತೀಶ್ ಕೆ., ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರಾದ ಹೆಚ್.ಎ.ಸಾತ್ವಿಕ್, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಕೆಎಸ್‍ಎಲ್‍ಎಸ್‍ಎದ ಉಪ ಕಾರ್ಯದರ್ಶಿ ಶ್ರೀಧರ ಎಂ ಅವರು ಉಪಸ್ಥಿತರಿರುವರು.
ಗೋಷ್ಠಿಗಳು : ನಾಳೆ 15 ಜಿಲ್ಲಾ ರಂಗಮಂದಿರದಲ್ಲಿ ನಡೆಯುವ ಬೃಹತ್ ಆರೋಗ್ಯ ಶಿಬಿರ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಬೆಳಗ್ಗೆ 11.45 ರಿಂದ ನಾಲ್ಕು ಗೋಷ್ಠಿಗಳು ನಡೆಯಲಿವೆ. ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12.15ರವರೆಗೆ ನಡೆಯಲಿರುವ 1ನೇ ಗೋಷ್ಠಿಯಲ್ಲಿ ‘ಕಾನೂನು ಜ್ಞಾನದ ಮಹತ್ವ’ ವಿಷಯದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ಉಪನ್ಯಾಸ ನೀಡುವರು.
ಮಧ್ಯಾಹ್ನ 12.16 ರಿಂದ ಮಧ್ಯಾಹ್ನ 12.45ರವರೆಗೆ ನಡೆಯಲಿರುವ ಎರಡನೇ ಗೋಷ್ಠಿಯಲ್ಲಿ ‘ದೇವದಾಸಿ ಮಹಿಳೆಯರಿಗೆ ಸರ್ಕಾರದ ವಿವಿಧ ಸೌಲಭ್ಯಗಳು’ ವಿಷಯದ ಮೇಲೆ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12.46 ರಿಂದ ಮಧ್ಯಾಹ್ನ 01.15ರವರೆಗೆ ನಡೆಯಲಿರುವ ಮೂರನೇ ಗೋಷ್ಠಿಯಲ್ಲಿ ‘ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬದವರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಅನುಕೂಲತೆಗಳು’ ವಿಷಯದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಅವರು ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 1.16 ರಿಂದ ಮಧ್ಯಾಹ್ನ 1.45ರವರೆಗೆ ನಡೆಯಲಿರುವ ನಾಲ್ಕನೇ ಗೋಷ್ಠಿಯಲ್ಲಿ ‘ದೇವದಾಸಿ ಮಹಿಳೆಯರು ಮತ್ತು ಅವರ ಹೋರಾಟದ ಹಕ್ಕುಗಳು’ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮೋಕ್ಷಮ್ಮ ಅವರು ಉಪನ್ಯಾಸ ನೀಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್