

ರಾಯಚೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಕಾನೂನು ಸೇವೆಗಳ ಪ್ರಾಧಿಕಾರವು ರಾಯಚೂರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಾಳೆ ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 9.30 ರಿಂದ ಹಮ್ಮಿಕೊಂಡ ಬೃಹತ್ ಆರೋಗ್ಯ ಶಿಬಿರ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತಾ ಸಭೆಯು ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಶಿ ಬಾಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನ್ಯಾ. ಮಾರುತಿ ಶಿ ಬಾಗಡೆ ಅವರು, ನವೆಂಬರ್ 15ರಂದು ಗೌರವಾನ್ವಿತ ಕರ್ನಾಟಕದ ಹೈಕೋರ್ಟನ ಮುಖ್ಯ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಈ ಕಾರ್ಯಕ್ರಮದ ಸಂಬಂಧ ರಾಯಚೂರು ಜಿಲ್ಲಾಧಿಕಾರಿಗಳು ಈಗಾಗಲೇ ನಾನಾ ಸಮಿತಿಗಳನ್ನು ರಚಿಸಿ, ಹಲವಾರು ಬಾರಿ ಸಭೆ ನಡೆಸಿ ತಿಳಿಸಿ, ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿದಂತೆ ಎಲ್ಲ ಅಧಿಕಾರಿಗಳು ಅಂದು ಮುತುವರ್ಜಿ ವಹಿಸಿ, ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಮಸ್ಯೆ ಇಲ್ಲದ ಹಳ್ಳಿಗಳೇ ಇಲ್ಲ. ಆದಾಗ್ಯು ರಾಯಚೂರು ಜಿಲ್ಲೆಯಲ್ಲಿ ವ್ಯಾಜ್ಯಗಳು ಕಡಿಮೆ ಇರುವ ಹಳ್ಳಿಯೊಂದನ್ನು ಗುರುತಿಸಿ, ಅಲ್ಲಿನ ವ್ಯಾಜ್ಯಗಳ ಬಗ್ಗೆ ಪರಿಶೀಲಿಸಿ, ಎಲ್ಲಾ ವ್ಯಾಜ್ಯಗಳನ್ನು ಯುದ್ಧೋಪಾದಿಯಲ್ಲಿ ಪರಿಹರಿಸಿ, ಆ ಹಳ್ಳಿಯನ್ನು ವ್ಯಾಜ್ಯ ಮುಕ್ತ ಹಳ್ಳಿ ಎಂದು ಘೋಷಿಸಿ ಎಲ್ಲ ಹಳ್ಳಿಗಳಿಗೆ ಮಾದರಿಯಾಗುವ ಹಾಗೆ ಈ ಕಾರ್ಯಯೋಜನೆಯೊಂದನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ ಮತ್ತು ಇಲಾಖೆ ಅಧಿಕಾರಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ನ್ಯಾ. ಬಾಗಡೆ ಅವರು ತಿಳಿಸಿದರು.
ಸಭೆಯಲ್ಲಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್ ಶಶಿಧರ ಶೆಟ್ಟಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಪಿ ಎಂ ಬಾಲಸುಬ್ರಮಣಿ, ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಹೆಚ್ ಎ ಸಾತ್ವಿಕ್, ಜಿಲ್ಲಾಧಿಕಾರಿ ನಿತೀಶ್ ಕೆ., ಅಪರ ಜಿಲ್ಲಾಧಿಕಾರಿ ಶಿವಾನಂದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ರಾಯಚೂರು ತಹಸೀಲ್ದಾರರಾದ ಸುರೇಶ ವರ್ಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಈರಣ್ಣ ಬಿರಾದಾರ, ಇಲಾಖೆ ಅಧಿಕಾರಿಗಳಾದ ಡಾ.ಸುರೇಂದ್ರಬಾಬು, ನವೀನಕುಮಾರ ಯು., ವೆಂಕಟೇಶ ಗಳಗ, ಆರತಿ, ಸುನಿತಾ ಘಟಕಾಂಬಳೆ, ಸಿಂಧು ರಘು ಹೆಚ್.ಎಸ್., ಉತ್ತರಾದೇವಿ, ಮಹೇಶ ನಾಯಕ, ಕೆ.ಡಿ.ಬಡಿಗೇರ, ನಾಗರಾಜ ಎಂ., ಜೈಪಾಲ ರೆಡ್ಡಿ, ರಾಘವೇಂದ್ರ ಹಾಗೂ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್