
ಬೆಂಗಳೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಡಾ.ಜಿ ಎಸ್ ರಾಂಧವ ಸಭಾಂಗಣದಲ್ಲಿ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಆಶ್ರಯದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಸಮಿತಿಯ 35ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಖ್ಯಾತ ರಂಗಕರ್ಮಿ ಹಾಗೂ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಬಿ ಜಯಶ್ರೀ ಅವರು ಸಮಿತಿಯು ಕೊಡ ಮಾಡುವ ಕನ್ನಡ ಕಂಪು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು, ಕನ್ನಡ ನಾಡು ಹಾಗೂ ಕನ್ನಡ ಭಾಷಿಗರ ಏಕೀಕರಣದ ಸಂಕೇತ ಕರ್ನಾಟಕ ರಾಜ್ಯೋತ್ಸವ, ಇದು ಕನ್ನಡಾಂಬೆಯ ಮರು ಹುಟ್ಟುಹಬ್ಬ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ತುಷಾರ್ ಕಾಂತಿ ಬೆಹಾರ್ ರವರು ಮಾತನಾಡಿ ಕರ್ನಾಟಕ ವೈವಿಧ್ಯ ಸಂಸ್ಕೃತಿಯ ನಾಡು, ಕಲೆಗಳ ಬೀಡು ಹಾಗೂ ಕವಿಗಳ ಮತ್ತು ವಿಜ್ಞಾನಿಗಳ ತವರೂರು, ಒಂದು ರಾಜ್ಯ -ಹಲವು ದೇಶ' ಎಂಬ ವ್ಯಾಖ್ಯಾನಕ್ಕೆ ಪ್ರಸಿದ್ದಿ ಪಡೆದಿದೆ ಎಂದರು.ಕವಿನುಡಿಯಾದ ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ' ಎಂಬ ಸಾಲನ್ನು ಪುನರುಚ್ಚರಿಸಿ ಕನ್ನಡ ಭಾಷೆ, ಕಲೆ ಹಾಗೂ ಸಾಹಿತ್ಯಕ್ಕೆ ಗೌರವ ಸಮರ್ಪಿಸಿದರು.
ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಎಚ್ ಸಿ ಪ್ರಸನ್ನ ರವರು ಸ್ವಾಗತ ಕೋರಿದರು, ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಓಂಕಾರ್ ನಾಯಕ ರವರು ವಾರ್ಷಿಕ ವರದಿ ಮಂಡಿಸಿದರು ಹಾಗೂ ಉಪಾಧ್ಯಕ್ಷರಾದ ಡಾಕ್ಟರ್ ಪಿ ನಂದೀಶ್ ರವರು ವಂದನಾರ್ಪಣೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಮತ್ತು ಕರ್ನಾಟಕ ರತ್ನ ಅಪ್ಪು ರವರ ಸವಿನೆನಪಿನಲ್ಲಿ ಸಂಸ್ಥೆಯ ಇಬ್ಬರು ಮಹಿಳಾ ಸಿಬ್ಬಂದಿಯ ಪ್ರಾಯೋಜಕತ್ವದಲ್ಲಿ ಸಮೀಪದ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa