

ಕೊಪ್ಪಳ, 12 ನವೆಂಬರ್ (ಹಿ.ಸ.)
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ಭಾಗ್ಯನಗರ ವ್ಯಾಪ್ತಿಯ ನವನಗರದ ಅಂಗನವಾಡಿ ಕೇಂದ್ರದಲ್ಲಿ ಬುಧವಾರದಂದು ವಿಶ್ವ ನ್ಯೂಮೋನಿಯಾ ದಿನಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಮಾತನಾಡಿ, ಪ್ರತಿ ವರ್ಷ ನವೆಂಬರ್ 12 ರಂದು ವಿಶ್ವ ನ್ಯೂಮೋನಿಯಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ನ್ಯುಮೋನಿಯಾದಿಂದ ಉಂಟಾಗುವ ಸಾವು ನೋವುಗಳ ತಡೆಗಟ್ಟಲು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಈ ಕಾರ್ಯಕ್ರಮವನ್ನು ಜಾಗತಿಕ ಮಟ್ಟದಲ್ಲಿ 2009 ರಿಂದ ನಿರಂತವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ರಕ್ಷಣಾ ವ್ಯವಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳು ಕೈಜೋಡಿಸಿ, ಜಾಗೃತಿ ಮೂಡಿಸಲಾಗುತ್ತದೆ.
ಲಸಿಕೆ ಮತ್ತು ಅದರ ಗುಣಮಟ್ಟದ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದಾಗಿದೆ. ನ್ಯೂಮೋನಿಯಾ ಒಂದು ಶ್ವಾಸಕೋಶದ ಸೋಂಕಾಗಿದ್ದು, ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳಿಗೆ ಹರಡಿ, ಸೋಂಕಿನ ದ್ರವದಿಂದ ಶ್ವಾಸಕೋಶ ಬಲಹೀನಗೊಳ್ಳುತ್ತದೆ. ಇದು ಎರಡು ಶ್ವಾಸಕೋಶಗಳಿಗೂ ಹರಡಬಹುದು ಎಂದು ಹೇಳಿದರು.
ಯಾರಿಗಾದರೂ ಕೆಮ್ಮು ಮತ್ತು ಶೀತ ಹೆಚ್ಚಾಗುವುದು, ತೀವ್ರ ಉಸಿರಾಟದ ತೊಂದರೆ, ಪಕ್ಕೆಸೆಳೆತ, ತೀವ್ರ ರೀತಿಯ ಜ್ವರ, ಹಸಿವು ಆಗದೇ ಇರುವುದು, ವಾಕರಿಕೆ, ಅತಿಸಾರ, ನ್ಯುಮೋನಿಯಾ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. 5 ವರ್ಷದೊಳಗಿನ ಮಕ್ಕಳಿಗೆ ನ್ಯೂಮೋನಿಯಾ ಖಾಯಿಲೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಮುಂಜಾಗ್ರತೆಯಾಗಿ ಮಗುವಿಗೆ 6 ತಿಂಗಳವರೆಗೆ ಕೇವಲ ತಾಯಿಯ ಎದೆಹಾಲು ಮಾತ್ರ ನೀಡಬೇಕು. 6 ತಿಂಗಳ ನಂತರ ಪೂರಕ ಪೌಷ್ಠಿಕ ಆಹಾರ ನೀಡುವುದು, ಕುಡಿಯುವ ನೀರನ್ನು ಮುಚ್ಚಿಡುವುದು, ಆಹಾರ ತಯಾರಿಸುವ ಮುನ್ನ, ಊಟದ ಮೊದಲು, ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳಿಗೆ ಸೋಪು ಬಳಸಿ, ಕೈ ತೊಳೆದುಕೊಳ್ಳಬೇಕು. ಮಕ್ಕಳಿಗೆ ಸಕಾಲದಲ್ಲಿ ಪಿ.ಸಿ.ವಿ ಲಸಿಕೆ ಹಾಕಿಸಬೇಕು. ಮಕ್ಕಳ ಮೈತುಂಬಾ ಬಟ್ಟೆ ಹಾಕಬೇಕು. ಮಗುವನ್ನು ಬೆಚ್ಚಗಿಡುವುದು, ಕಲುಷಿತ ವಾತಾವರಣ, ಜನಸಂದಣಿ ಪ್ರದೇಶದಲ್ಲಿ ಅನಗತ್ಯವಾಗಿ ಹೋಗಬಾರದು. ವ್ಯಾಯಾಮ, ಯೋಗ, ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗೋವಿಂದಪ್ಪ ಇವರು ಆರ್.ಸಿ.ಹೆಚ್, ಕುಟುಂಬ ಕಲ್ಯಾಣ ಕಾರ್ಯಕ್ರಮ, ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಹಾಗೂ ಸೋಂಕಿತ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಕುರಿತು ವಿವರವಾಗಿ ಮಾತನಾಡಿದರು. ಸಮುದಾಯ ಆರೋಗ್ಯಾಧಿಕಾರಿ ಹೇಮಾ ಬಾಲ್ಯವಿವಾಹ ನಿಷೇಧ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಸುಮಂಗಲ ಎಂ.ಡಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾದ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರಾದ ಸುಮಂಗಲ, ಆಶಾ ಕಾರ್ಯಕರ್ತೆಯರಾದ ಶೈನಾಜ್ ಬೇಗಂ, ವಾರ್ಡಿನ ಗುರು-ಹಿರಿಯರು, ತಾಯಂದಿರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್