ಭಯೋತ್ಪಾದಕ ಶಾಹೀನ್‌ ಸಹೋದರ ಪರ್ವೇಜ್ ಬಂಧನ
ಲಕ್ನೋ, 12 ನವೆಂಬರ್ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಡಾ. ಶಾಹೀನ್ ಅನ್ಸಾರಿ ಅವರ ಸಹೋದರ ಡಾ. ಪರ್ವೇಜ್ ಅನ್ಸಾರಿಯನ್ನು ವಶಕ್ಕೆ ಪಡೆದಿದ
ಭಯೋತ್ಪಾದಕ ಶಾಹೀನ್‌ ಸಹೋದರ ಪರ್ವೇಜ್ ಬಂಧನ


ಲಕ್ನೋ, 12 ನವೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಡಾ. ಶಾಹೀನ್ ಅನ್ಸಾರಿ ಅವರ ಸಹೋದರ ಡಾ. ಪರ್ವೇಜ್ ಅನ್ಸಾರಿಯನ್ನು ವಶಕ್ಕೆ ಪಡೆದಿದೆ.

ಲಕ್ನೋ, ಸಹರಾನ್‌ಪುರ, ಶಾಮ್ಲಿ ಹಾಗೂ ಇತರ ಜಿಲ್ಲೆಗಳಲ್ಲಿ ಎಟಿಎಸ್ ನಡೆಸಿದ ತಪಾಸಣಾ ದಾಳಿಗಳ ಭಾಗವಾಗಿ ಈ ಬಂಧನ ನಡೆದಿದೆ. ಪ್ರಸ್ತುತ ಡಾ. ಪರ್ವೇಜ್ ಅವರನ್ನು ಭದ್ರತಾ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಟಿಎಸ್ ಹಾಗೂ ಜಮ್ಮು–ಕಾಶ್ಮೀರ ಪೊಲೀಸರು ನವೆಂಬರ್ 6ರಂದು ಮಡಿಯಾನ್ವ್‌ನ ಮುತ್ತಕಿಪುರದಲ್ಲಿರುವ ಡಾ. ಪರ್ವೇಜ್ ಮನೆಯಲ್ಲಿ ದಾಳಿ ನಡೆಸಿದರು. ಮನೆ ಖಾಲಿಯಾಗಿದ್ದರೂ, ಅಧಿಕಾರಿಗಳು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು, ವಾಹನಗಳು ಹಾಗೂ ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪರ್ವೇಜ್ 2021ರಲ್ಲಿ ಲಕ್ನೋನ ಇಂಟೆಗ್ರಲ್ ವಿಶ್ವವಿದ್ಯಾಲಯದಲ್ಲಿ ಹಿರಿಯ ನಿವಾಸಿಯಾಗಿ ಸೇರಿದ್ದರು. ಆದರೆ ನವೆಂಬರ್ 6ರಂದು ಹಠಾತ್ ರಾಜೀನಾಮೆ ನೀಡಿ ಕಾಣೆಯಾಗಿದ್ದರು ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.

ಡಾ. ಪರ್ವೇಜ್, ಫರಿದಾಬಾದ್‌ನಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟ ಡಾ. ಶಾಹೀನ್ ಅನ್ಸಾರಿ ಸಹೋದರರಾಗಿದ್ದಾರೆ. ಶಾಹೀನ್ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮಹಿಳಾ ವಿಭಾಗವಾದ ಜಮಾತ್-ಉಲ್-ಮೊಮಿನಾತ್‌ಗಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.

ಈಕೆ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದು, ಶಿಕ್ಷಣದ ಆವರಣದಡಿ ಯುವತಿಯರನ್ನು ಉಗ್ರ ಚಟುವಟಿಕೆಗಳಿಗೆ ಸೆಳೆಯುತ್ತಿದ್ದರೆಂಬ ಶಂಕೆಯಿದೆ.

ತನಿಖೆಯಲ್ಲಿ ಶಾಹೀನ್ ಮತ್ತು ಉಗ್ರ ಮುಜಮ್ಮಿಲ್ ನಡುವೆ ಪ್ರೇಮ ಸಂಬಂಧವಿದ್ದ ವಿಚಾರವೂ ಬಹಿರಂಗವಾಗಿದೆ. ಜಮ್ಮು–ಕಾಶ್ಮೀರ ಪೊಲೀಸರು ಮುಜಮ್ಮಿಲ್ ಬಂಧಿಸಿದಾಗ ಅವನ ಬಳಿ ಪತ್ತೆಯಾದ ಕಾರು ಶಾಹೀನ್ ಹೆಸರಿನಲ್ಲಿತ್ತು. ಅದರಿಂದ ಎಕೆ–47 ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಟುಂಬದ ಪ್ರತಿಕ್ರಿಯೆ

ಶಾಹೀನ್ ತಂದೆ ಸಯೀದ್ ಅನ್ಸಾರಿ ಅವರನ್ನು ಎಟಿಎಸ್ ವಿಚಾರಣೆಗೊಳಪಡಿಸಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆಕೆ ಕಳೆದ ಒಂದೂವರೆ ವರ್ಷಗಳಿಂದ ಕುಟುಂಬದ ಸಂಪರ್ಕದಲ್ಲಿರಲಿಲ್ಲ. ಆಕೆ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಳೆಂಬುದನ್ನು ನಂಬುವುದು ಕಷ್ಟ,”

ಎಂದು ಹೇಳಿದ್ದಾರೆ.

ಶಾಹೀನ್ ಪ್ರಯಾಗರಾಜ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ, ನಂತರ ಕಾನ್ಪುರದ ಗಣೇಶ್ ಶಂಕರ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. 2013ರಲ್ಲಿ ದಿಢೀರ್ ಕಾಲೇಜು ತೊರೆದು, ಬಳಿಕ ಗೈರುಹಾಜರಿಗಾಗಿ ಸೇವೆಯಿಂದ ವಜಾಗೊಂಡಿದ್ದರು.

ಪರ್ವೇಜ್ ಮೊಬೈಲ್‌ ಫೋನ್ 48 ಗಂಟೆಗಳ ಹಿಂದೆ ಸ್ವಿಚ್‌ಆಫ್ ಆಗಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಎಟಿಎಸ್ ಹಾಗೂ ಜಮ್ಮು–ಕಾಶ್ಮೀರ ಪೊಲೀಸರು ಇಬ್ಬರ ಸಂಪರ್ಕ ಜಾಲದ ಕುರಿತು ಆಳವಾದ ತನಿಖೆ ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande