

ಹೊಸಪೇಟೆ, 12 ನವೆಂಬರ್ (ಹಿ.ಸ.)
ಆ್ಯಂಕರ್ : ವಿದ್ಯಾರ್ಥಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸದ ಜತಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ನೋಂಗ್ಜಾಜಯ್ ಮೋಹಮ್ಮದ್ ಅಲಿ ಅಕ್ರಮ್ ಷಾ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.
ವಿದ್ಯಾರ್ಥಿ ಜೀವನದ ಸಮಯವು ಅತ್ಯಮೂಲ್ಯವಾದದ್ದು ಅದನ್ನು ಯಾವುದೆ ಕಾರಣಕ್ಕೂ ವ್ಯರ್ಥ ಮಾಡದೆ ನಿರಂತರವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ನಿಗಧಿತ ಗುರಿ ತಲುಪಿ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು. ನಾನು ಪಿಯು ಹಂತದಲ್ಲಿದ್ದಾಗ ಭವಿಷ್ಯದ ಬಗ್ಗೆ ನಿರ್ಧರಿಸುವ ಸಲಹೆ ಮತ್ತು ಇಂತಹ ಅವಕಾಶ ಸಿಕ್ಕಿರಲಿಲ್ಲ. ಎಲ್ಲರಿಗೂ ಓದುವ ಅವಕಾಶಗಳು ದೊರೆಯುವುದಿಲ್ಲ.
ಆದ್ದರಿಂದ ವಿದ್ರ್ಯಾರ್ಥಿಗಳು ತಮಗೆ ಸಿಕ್ಕಿರುವ ಅಮೂಲ್ಯ ಅವಕಾಶವನ್ನು ಬಳಸಿಕೊಳ್ಳಬೇಕು. ದಿನ ನಿತ್ಯವು ಯೋಗ ಮತ್ತು ಧ್ಯಾನವನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು. ಹಾಗೂ ಅವಶ್ಯಕತೆ ಇದ್ದಲ್ಲಿ ಮಾತ್ರ ಮೊಬೈಲ್ ಬಳಕೆ ಮಾಡಿ, ಎರಡು ದಿನ ನಡೆಯುವ ತರಬೇತಿಯ ಬಗ್ಗೆ ಗಮನ ಕೊಡಬೇಕು. ನಾನು ಸಹ ಸಮಯ ಸಿಕ್ಕಾಗ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ ಎಂದರು.
ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಗಾರವನ್ನು ಸಿಐಜಿಎಮ್‍ಎ ಫೌಂಡೇಶನ್ ಬೆಂಗಳೂರು ರವರು ಆಯೋಜಿಸಿದ್ದರು.
ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್.ಕೆ.ಕರಂಗಿ, ಸಿನ್ಮಾ ಫೌಂಡೇಷನ್ ಮುಖ್ಯಸ್ಥರಾದ ಅಮೀನ್.ಇ.ಮುದಾಸಿರ್, ಸೈಯದ್ ಭಾನು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್