


ರಾಯಚೂರು , 12 ನವೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದಿದ್ದಕ್ಕಾಗಿ ಹತ್ತು ಹಲವು ರಾಷ್ಟಿಯ, ಅಂತಾರಾಷ್ಟಿಯ ಪ್ರಶಸ್ತಿ ಪುರಸ್ಕಾರಗಳು ಪಡೆದಿದೆ ಎಂದು ಕೆಕೆಆರ್‌ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಅವರು ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆಯೇ ಸಾರಿಗೆ ಇಲಾಖೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಇನ್ನೂ ಉತ್ತಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದುವುದಕ್ಕಾಗಿ ಬೇಕಾದ ಸುಧಾರಣೆಗಳನ್ನು ತರಲು ನಮ್ಮ ಸರ್ಕಾರ ಸಿದ್ಧವಿದೆ. ನಮ್ಮ ಜನಪರ ಆಲೋಚನೆಗಳನ್ನು ಜಾರಿ ತರುವ ನಿಟ್ಟಿನಲ್ಲಿ ಮೊದಲ ಹಂತದ ಭೇಟಿ ಇದಾಗಿದ್ದು, ಹಂತಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಅವರು ಹೇಳಿದರು.
ರಾಯಚೂರು ಕೇಂದ್ರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಕಾಮಗಾರಿ, ಗ್ರಾಮೀಣ ಬಸ್ ಘಟಕ-1, ರಾಯಚೂರು ಬಸ್ ಘಟಕ-2 ಹಾಗೂ ರಾಯಚೂರು ವಿಭಾಗೀಯ ಕಚೇರಿ ಸ್ಥಳಗಳಿಗೆ ಭೇಟಿ ಮಾಡಿ ಅಲ್ಲಿನ ಸಿಬ್ಬಂದಿಗಳ ಕಾರ್ಯ ವೈಖರಿಗಳನ್ನು ವೀಕ್ಷಿಸಿ ಅವರ ಉತ್ತಮ ರೀತಿಯ ಸ್ವಚ್ಛತೆ ಪರಿಶೀಲಿಸಿ ಹಾಗೂ ಸಿಬ್ಬಂದಿಗಳ ಸಮಸ್ಯೆಗಳನ್ನೂ ಆಲಿಸಿ ಅವರ ಐಕ್ಯತೆಯ ಕಾರ್ಯ ಮೆಚ್ಚುವಂಥದ್ದು ಎಂದು ಅಧ್ಯಕ್ಷರು ಪ್ರಶಂಸಿದರು. ಈ ವೇಳೆ ವಿದ್ಯಾರ್ಥಿಗಳ ಮತ್ತು ಹಿರಿಯ ನಾಗರಿಕರಿಂದ ಬಸ್ಸಿನ ಸಮಸ್ಯೆಗಳನ್ನು ಆಲಿಸಿದರು.
ಸುಗಮ ಸಾರಿಗೆ ಸೇವೆಯ ನಡುವೆ ಕೆಲ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ಹಾಗೂ ಘಟಕ ವ್ಯವಸ್ಥಾಪಕರು ಸರಿಪಡಿಸಬೇಕು ಎಂದು ಅವರು ಸೂಚನೆ ನೀಡಿದರು.
ನಮ್ಮ ಕಡೆಯಿಂದ ಬೇಕಾದ ಸಹಾಯ, ಸೌಲಭ್ಯ, ಸಹಕಾರ ಪಡೆಯಲು ಮುಕ್ತವಾಗಿ ತಿಳಿಸಿದರೆ ಖಂಡಿತವಾಗಿ ಸಹಾಯ ಮಾಡುವುದಲ್ಲದೆ ಸುಗಮ ಸಾರಿಗೆ ಜನರ ಊರಿಗೆ ಎನ್ನುವ ಧೇಯವಾಕ್ಯವನ್ನು ಸಫಲಗೊಳಿಸುತ್ತೇವೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಉಪ ಮುಖ್ಯಯಾಂತ್ರಿಕ ಅಭಿಯಂತರಾದ ರಾಜಗೋಪಾಲ ಪುರಾಣಿಕ, ರಾಯಚೂರು ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ಚಂದ್ರಶೇಖರ ಎಂ.ಎಸ್, ವಿದ್ಯಾಸಾಗರ, ಮುದ್ದುಕೃಷ್ಣ, ವಿಜಯಕುಮಾರ ಮತ್ತು ಘಟಕ ವ್ಯವಸ್ಥಾಪಕರು ಮತ್ತು ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್