
ಗದಗ, 12 ನವೆಂಬರ್ (ಹಿ.ಸ.)
ಆ್ಯಂಕರ್:
ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಅಮಾನತು ಹಾಗೂ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಶಿರಹಟ್ಟಿ ಪೊಲೀಸ್ ಠಾಣೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ದೇವಿಹಾಳ ತಾಂಡಾದ ನಿವಾಸಿ ಸೋಮಣ್ಣ ಲಮಾಣಿ ಎಂಬುವವರನ್ನು ಜೂಜಾಟ ಆಡುವ ಆರೋಪ ಹೊರೆಸಿ, ಪಿಎಸ್‌ಐ ರಿತ್ತಿ ಠಾಣೆಗೆ ಕರೆತಂದು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರು ಹಲ್ಲೆಗೊಳಗಾದ ಸೋಮಣ್ಣನೊಡನೆ ಠಾಣೆ ಎದುರಿಗೇ ಬಂದು ಕುಳಿತು ಸತ್ಯಾಗ್ರಹ ಆರಂಭಿಸಿದರು.
ಪೊಲೀಸ್ ಅಧಿಕಾರಿಯ ವರ್ತನೆಗೆ ವಿರೋಧ ವ್ಯಕ್ತಪಡಿಸಿದ ಶಾಸಕರು, “ಪಿಎಸ್‌ಐ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಅಮಾನತು ಮಾಡಬೇಕು, ಇಲ್ಲವಾದರೆ ಹೋರಾಟ ಮುಂದುವರೆಯುತ್ತದೆ” ಎಂದು ಎಚ್ಚರಿಕೆ ನೀಡಿದರು.
ಘಟನೆ ಸ್ಥಳದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಹಾಜರಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಇರಿಸಲು ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಜಿಲ್ಲೆ ಮಟ್ಟದ ಪೊಲೀಸ್ ಅಧಿಕಾರಿಗಳು ಶಾಸಕರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಸೋಮಣ್ಣ ಲಮಾಣಿ ಮೇಲೆ ನಡೆದ ಹಲ್ಲೆ ವಿಚಾರವಾಗಿ ತನಿಖೆ ಪ್ರಾರಂಭವಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಮಟ್ಟದ ವರದಿ ನಿರೀಕ್ಷೆಯಲ್ಲಿದೆ. ಶಿರಹಟ್ಟಿಯಲ್ಲಿ ಈ ಘಟನೆ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP