
ರಾಯಚೂರು, 12 ನವೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನವೆಂಬರ್ 15ರಂದು ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ನವಂಬರ್ 15ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ, ರಾಯಚೂರು ಜಿಲ್ಲೆಯ ದೇವದಾಸಿಯರ ಸ್ಥಿತಿ ಗತಿ ಹಾಗೂ ಪುನರ್ವಸತಿ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮವು ಸಕಾಲಕ್ಕೆ, ಶಿಸ್ತಿನಿಂದ ಹಾಗೂ ಯಶಸ್ವಿಯಾಗಿ ನಡೆಯುವಂತೆ ರಾಯಚೂರು ಸಹಾಯಕ ಆಯುಕ್ತರ ಮೇಲುಸ್ತುವಾರಿಯಲ್ಲಿ ಸಂಬಂಧಪಟ್ಟದ ಇಲಾಖಾಧಿಕಾರಿಗಳು, ಇಲಾಖಾ ಸಿಬ್ಬಂದಿಯಿಂದ ರಚಿಸಿದ ಸಮಿತಿಗಳಿಗೆ ವಹಿಸಿದ ಎಲ್ಲ ಕಾರ್ಯಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಗಣ್ಯರ ಸ್ವಾಗತ, ಶಿಷ್ಟಾಚಾರ, ಆಮಂತ್ರಣ ಪತ್ರಿಕೆ, ಕಲಾ ತಂಡಗಳ ಇತ್ಯಾದಿ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು, ಬಿಸಿಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಯಚೂರು ತಹಸೀಲ್ದಾರರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಶಿಸ್ತಿನಿಂದ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ರಂಗಮಂದಿರದಲ್ಲಿ ವಿದ್ಯುತ್ ಸಂಪರ್ಕ ಹಾಗೂ ವೇದಿಕೆ ಅಲಂಕಾರದ ಬಗ್ಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಮತ್ತು ಜೆಸ್ಕಾಂ ಅಧಿಕಾರಿಗಳು ಅಗತ್ಯ ಏರ್ಪಾಡು ಮಾಡಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸೂಕ್ತ ಭದ್ರತೆ ಒದಗಿಸಲು ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಿದರು.
ಸಾರ್ವಜನಿಕರು, ಗಣ್ಯರು, ಅಧಿಕಾರಿಗಳು, ಪತ್ರಕರ್ತರಿಗೆ ಕುಡಿಯುವ ನೀರು ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಬೇಕು. ಅಗತ್ಯ ಪ್ರಚಾರ ಕಾರ್ಯಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಆಹಾರ ಇಲಾಖೆ, ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತುರ್ತು ಚಿಕಿತ್ಸೆಗಾಗಿ ವೈದ್ಯಾಧಿಕಾರಿ ಮತ್ತು ನುರಿತ ಸಿಬ್ಬಂದಿಗಳೊಂದಿಗೆ ಸೂಕ್ತ ಅಂಬೂಲೆನ್ಸ್ ವ್ಯವಸ್ಥೆ ಮಾಡಬೇಕು. ಅಗ್ನಿಶಾಮಕ ಅಧಿಕಾರಿಗಳು, ಕಾರ್ಯಕ್ರಮದ ಸ್ಥಳದಲ್ಲಿ ಅಗ್ನಿ ಶಾಮಕವಾಹನದೊಂದಿಗೆ ನುರಿತ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. ದೇವದಾಸಿ ಮಹಿಳೆಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆಗೆ ಕ್ರಮ ವಹಿಸಲು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ವಿವಿಧ ಇಲಾಖೆಯ ಅಧಿಕಾರಿಗಳಾದ ನವೀನ್ ಕುಮಾರ್, ಡಾ.ಸುರೇಂದ್ರ ಬಾಬು, ನಸೀರ್ ಅಹಮದ್, ರಾಜೇಂದ್ರ ಜಲ್ದಾರ್, ಆಗ್ನಿ ಶಾಮಕದಳದ ರವೀಂದ್ರ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಮತ್ತು ಮತ್ತಿತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್