
ಬೆಂಗಳೂರು, 12 ನವೆಂಬರ್ (ಹಿ.ಸ.):
ಆ್ಯಂಕರ್:ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಫಲಿತಾಂಶ ಬಂದ ಬಳಿಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡುವುದು ಖಂಡಿತ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಚುನಾವಣೆ ಪ್ರತಿಷ್ಠಿತ ಚುನಾವಣೆಯಾಗಿದೆ. ಬಿಹಾರದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದ್ದರೂ ಈ ಬಾರಿ ಉತ್ತಮವಾಗಿ ಮತದಾನ ನಡೆದಿದೆ. ಅಮಿತ್ ಶಾ ಗೃಹ ಸಚಿವರಾದ ಬಳಿಕ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 12 ಕ್ಕೂ ಹೆಚ್ಚು ಸಂಸ್ಥೆಗಳು ಸಮೀಕ್ಷೆ ಮಾಡಿದ್ದು, ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್‌ನ ಘಟಬಂಧನಕ್ಕೆ ಬೆಂಬಲ ಇಲ್ಲ ಎಂದು ಹೇಳಲಾಗಿದೆ ಎಂದರು.
ಬಿಹಾರ ಚುನಾವಣೆಯ ಫಲಿತಾಂಶ ಬಂದ ಬಳಿಕ ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡುತ್ತಾರೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸರಣಿಯಾಗಿ ಸೋಲುತ್ತಿದೆ. ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಐರನ್ ಲೆಗ್ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶ ಬಂದ ನಂತರ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಒಂದು ಕಡೆ ಲೋಕಸಭೆಯಲ್ಲೂ ಅವರು ಕೆಲಸ ಮಾಡುತ್ತಿಲ್ಲ, ಮತ್ತೊಂದು ಕಡೆ ಪಕ್ಷಕ್ಕಾಗಿಯೂ ಕೆಲಸ ಮಾಡುತ್ತಿಲ್ಲ ಎಂದರು.
ದೆಹಲಿಯಲ್ಲಾದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ಮೊಬೈಲ್ ಕೊಟ್ಟಿದ್ದು ಯಾರು ಎಂದು ತನಿಖೆ ಮಾಡಬೇಕಿದೆ ಅಥವಾ ಮೊಬೈಲ್ ಬಳಸಿ ಏನು ಮಾಡಿದ್ದಾರೆ ಎಂದು ತನಿಖೆ ಮಾಡಬೇಕಿತ್ತು. ಆದರೆ ಈ ವೀಡಿಯೋ ಹೊರಗೆ ಬಂದಿದ್ದು ಹೇಗೆ ಎಂದು ತನಿಖೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರ ಕೂಡ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಸ್ಲಿಮರ ಪರವಾದ ಮೃದುವಾದ ಧೋರಣೆ ಒಳ್ಳೆಯದಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ದೆಹಲಿಯನ್ನು ನೋಡಬೇಕಿಲ್ಲ. ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದಾಗ ದಲಿತರನ್ನು ಸುಟ್ಟು ಹಾಕಲಾಗಿತ್ತು. ಆ ಪ್ರಕರಣದಲ್ಲಿ ಖರ್ಗೆಯವರ ವಿಫಲತೆಯನ್ನು ಇವರು ಮೊದಲು ನೋಡಲಿ. ಅಮಿತ್ ಶಾ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇಲ್ಲ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa