
ಥಿಂಪು (ಭೂತಾನ್),12 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೂತಾನ್ ಪ್ರವಾಸ ಇಂದು ಮುಕ್ತಾಯಗೊಂಡಿದೆ. ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ಮಧ್ಯೆ ನಡೆದ ಈ ಭೇಟಿಯು ಎರಡು ರಾಷ್ಟ್ರಗಳ ರಾಜತಾಂತ್ರಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ.
ಭೂತಾನ್‌ನ ತಾಶಿಚೋಜಾಂಗ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನಮನ ಸಲ್ಲಿಸಿದರು.
ಭಾರತದಿಂದ ತರಲಾದ ಭಗವಾನ್ ಬುದ್ಧನ ಅವಶೇಷಗಳನ್ನು ಭೂತಾನ್‌ನಲ್ಲಿ ಸ್ವೀಕರಿಸಿದ ಗೌರವದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಇದು ನಮ್ಮ ನಡುವಿನ ಅವಿನಾಭಾವ ಆಧ್ಯಾತ್ಮಿಕ ಬಂಧವನ್ನು ಪ್ರತಿಬಿಂಬಿಸುತ್ತದೆ. ಇದು ಭಗವಾನ್ ಬುದ್ಧನ ಶಾಂತಿ ಮತ್ತು ಸಾಮರಸ್ಯದ ಸಂದೇಶದಲ್ಲಿ ಬೇರೂರಿದೆ ಎಂದು ಪ್ರಧಾನಿ ತಮ್ಮ ಎಕ್ಸ ಖಾತೆಯಲ್ಲಿ ಹೇಳಿದ್ದಾರೆ.
ಹದಿನಾರು ದಿನಗಳ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ ನವೆಂಬರ್ 4ರಂದು ಪ್ರಾರಂಭವಾಗಿ ನವೆಂಬರ್ 19ರವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ಭೂತಾನ್ ಸೇರಿದಂತೆ ಅನೇಕ ದೇಶಗಳ ಸಾವಿರಾರು ಸನ್ಯಾಸಿಗಳು, ಲಾಮಾಗಳು ಮತ್ತು ಭಕ್ತರು ಭಾಗವಹಿಸುತ್ತಿದ್ದಾರೆ. ವಿಶ್ವ ಶಾಂತಿ, ಕರುಣೆ ಮತ್ತು ಸಂತೋಷಕ್ಕಾಗಿ ಎಲ್ಲಾ ಬೌದ್ಧ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ.
ಭಾರತದಿಂದ ತರಲಾದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ನವೆಂಬರ್ 8ರಂದು ಥಿಂಪು ತಲುಪಿದವು. ನವೆಂಬರ್ 12ರಿಂದ 17ರವರೆಗೆ ಅವುಗಳನ್ನು ತಾಶಿಚೋಜಾಂಗ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ. ಪಿಪ್ರಾಹ್ವಾ (ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆ)ಯಿಂದ ಪತ್ತೆಯಾದ ಈ ಅವಶೇಷಗಳು ಪ್ರಾಚೀನ ಕಪಿಲ್‌ವಾಸ್ತುವಿನ ಭಾಗವೆಂದು ಪರಿಗಣಿಸಲಾಗಿದೆ.
ಭೂತಾನ್‌ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ಹುಟ್ಟುಹಬ್ಬದ ಸ್ಮರಣಾರ್ಥ ಈ ಶಾಂತಿ ಉತ್ಸವವನ್ನು ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಉನ್ನತ ಮಟ್ಟದ ಮಾತುಕತೆ ನಡೆಸಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚಿಸಿದರು.
ಭಾರತವು ಭೂತಾನ್‌ಗೆ ₹4,000 ಕೋಟಿ ರಿಯಾಯಿತಿ ಸಾಲ ನೀಡುವುದಾಗಿ ಘೋಷಿಸಿತು. ಈ ಮೊತ್ತವನ್ನು ಇಂಧನ, ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು. ಭಾರತ–ಭೂತಾನ್ ಇಂಧನ ಸಹಕಾರದಲ್ಲಿ ಹೊಸ ಮೈಲಿಗಲ್ಲಾಗಿ 1020 ಮೆಗಾವ್ಯಾಟ್ ಸಾಮರ್ಥ್ಯದ ಪನ್ಬನ್‌ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಇಬ್ಬರು ನಾಯಕರು ಜಂಟಿಯಾಗಿ ಉದ್ಘಾಟಿಸಿದರು.
ಇದೇ ವೇಳೆ ವಾರಣಾಸಿಯಲ್ಲಿ ಭೂತಾನ್ ದೇವಾಲಯ, ಮಠ ಮತ್ತು ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಹಂಚಿಕೆ, ಗೆಲೆಫುವಿನ ಹತಿಸರ್‌ನಲ್ಲಿ ಹೊಸ ವಲಸೆ ತಪಾಸಣಾ ಕೇಂದ್ರ ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದರು.
ನವೀಕರಿಸಬಹುದಾದ ಇಂಧನ, ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರಗಳಲ್ಲಿ ಮೂರು ಒಪ್ಪಂದಗಳಿಗೆ ಸಹಿ ಹಾಕುವ
ಮೂಲಕ ಸಹಕಾರದ ಹೊಸ ದಿಕ್ಕು ತೆರೆದಿದೆ.
ಭೂತಾನ್ ರಾಜ ವಾಂಗ್‌ಚುಕ್, ದೆಹಲಿಯಲ್ಲಿ ನಡೆದ ಇತ್ತೀಚಿನ ಸ್ಫೋಟದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಮೋದಿ ಅವರು ಭೂತಾನ್‌ನ ಪ್ರಗತಿಪರ ದೃಷ್ಟಿಕೋನವನ್ನು ಶ್ಲಾಘಿಸಿ, “ಭಾರತ ಸದಾ ಭೂತಾನ್‌ನ ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರನಾಗಿರುತ್ತದೆ” ಎಂದರು.
ಭಾರತವು ಭಗವಾನ್ ಬುದ್ಧನ ಅವಶೇಷಗಳನ್ನು ಸದ್ಭಾವನೆಯ ಉಡುಗೊರೆಯಾಗಿ ಭೂತಾನ್‌ಗೆ ಅರ್ಪಿಸಿರುವುದು ಎರಡೂ ದೇಶಗಳ ಆಧ್ಯಾತ್ಮಿಕ ಸಂಬಂಧದ ಸಂಕೇತವಾಗಿದೆ. ಈ ಮೂಲಕ ಭಾರತವು ಮತ್ತೊಮ್ಮೆ ವಿಶ್ವಕ್ಕೆ ಶಾಂತಿ, ಕರುಣೆ ಮತ್ತು ಮಾನವ ಏಕತೆಯ ಸಂದೇಶವನ್ನು ರವಾನಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa