
ಕೊಪ್ಪಳ , 12 ನವೆಂಬರ್ (ಹಿ.ಸ.)
ಆ್ಯಂಕರ್ : ದತ್ತು ಮಾಸಾಚರಣೆ-2025ರ ಕಾರ್ಯಕ್ರಮದ ಪ್ರಯುಕ್ತ ನವೆಂಬರ್ ಮಾಸವನ್ನು ಅಂತರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಸರಕಾರವು ಅವಕಾಶಗಳನ್ನು ಕಲ್ಪಿಸಿದೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು ತಿಳಿಸಿದ್ದಾರೆ.
ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಸರಕಾರವು ಹಲವಾರು ಕಾನೂನುಗಳಲ್ಲಿ ಅವಕಾಶಗಳನ್ನು ಕಲ್ಪಿಸಿದ್ದು, ಅವುಗಳಲ್ಲಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ-2021 ಪ್ರಮುಖವಾದದ್ದು. ಈ ಕಾಯ್ದೆಯನ್ವಯ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಮತ್ತು ರಾಜ್ಯದಲ್ಲಿ ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆಗಳನ್ನು ರಚಿಸಿ ಕಾರ್ಯನಿರ್ವಹಿಸುತ್ತಿದೆ.
ಈ ಪ್ರಾಧಿಕಾರವು ಮಿಷನ್ ವಾತ್ಸಲ್ಯ ತಂತ್ರಾಂಶದಲ್ಲಿ ಮಕ್ಕಳ ಅಪೇಕ್ಷಿತರು ಆನ್‍ಲೈನ ಮೂಲಕ ಅರ್ಜಿ ಸಲ್ಲಿಸಿದ ದಂಪತಿ ಅಥವಾ ವ್ಯಕ್ತಿಗಳ ಪೂರ್ವಾಪರ ಮಾಹಿತಿ ಪಡೆದು ಮಗುವನ್ನು ಪೋಷಿಸಲು ಅರ್ಹರಾಗಿರುವರೇ ಎಂದು ಪರಿಶೀಲಿಸಿ, ನಿಯಮಾನುಸಾರ ಯೋಗ್ಯ ಎಂದು ಕಂಡುಬಂದ ವ್ಯಕ್ತಿ ಅಥವಾ ದಂಪತಿಗಳಿಗೆ ಮಗುವನ್ನು ಕಾನೂನು ಬದ್ಧವಾಗಿ ದತ್ತು ನೀಡಲು ಕ್ರಮವಹಿಸುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ https://missionvatsalya.wcd.gov.in/adoption-under-jj-act ಗೆ ಸಂಪರ್ಕಿಸಬಹುದಾಗಿದೆ.
ದತ್ತು ಪಡೆಯಲು ಇರುವ ಮಾನದಂಡಗಳು; ಎರಡು ವರ್ಷದೊಳಗಿನ ಮಗುವನ್ನು ದತ್ತು ಪಡೆಯಲು ನಿರೀಕ್ಷಿತ ದತ್ತು ಪೋಷಕರ ಗರಿಷ್ಠ ಸಂಯೋಜಿತ ವಯಸ್ಸು 85 ವರ್ಷಗಳು ಮತ್ತು ಏಕ ಪೋಷಕರ ಗರಿಷ್ಠ ವಯಸ್ಸು 40 ವರ್ಷಗಳು. ಎರಡು ವರ್ಷ ಮೇಲ್ಪಟ್ಟು ಮತ್ತು ನಾಲ್ಕು ವರ್ಷಗಳವರೆಗೆ ಮಗುವನ್ನು ದತ್ತು ಪಡೆಯಲು ನಿರೀಕ್ಷಿತ ದತ್ತು ಪೋಷಕರ ಗರಿಷ್ಠ ಸಂಯೋಜಿತ ವಯಸ್ಸು 90 ವರ್ಷಗಳು ಮತ್ತು ಏಕ ಪೋಷಕರ ಗರಿಷ್ಠ ವಯಸ್ಸು 45 ವರ್ಷಗಳು. ನಾಲ್ಕು ವರ್ಷ ಮೇಲ್ಪಟ್ಟು ಮತ್ತು ಎಂಟು ವರ್ಷಗಳವರೆಗೆ ಮಗುವನ್ನು ದತ್ತು ಪಡೆಯಲು ನಿರೀಕ್ಷಿತ ದತ್ತು ಪೋಷಕರ ಗರಿಷ್ಠ ಸಂಯೋಜಿತ ವಯಸ್ಸು 100 ವರ್ಷಗಳು ಮತ್ತು ಏಕ ಪೋಷಕರ ಗರಿಷ್ಠ ವಯಸ್ಸು 50 ವರ್ಷಗಳು. ಎಂಟು ವರ್ಷ ಮೇಲ್ಪಟ್ಟು ಮತ್ತು 18 ವರ್ಷಗಳವರೆಗೆ ಮಗುವನ್ನು ದತ್ತು ಪಡೆಯಲು ನಿರೀಕ್ಷಿತ ದತ್ತು ಪೋಷಕರ ಗರಿಷ್ಠ ಸಂಯೋಜಿತ ವಯಸ್ಸು 110 ವರ್ಷಗಳು ಮತ್ತು ಏಕ ಪೋಷಕರ ಗರಿಷ್ಠ ವಯಸ್ಸು 55 ವರ್ಷಗಳು.
ದತ್ತು ಪಡೆಯಲು ಬೇಕಾಗುವ ದಾಖಲಾತಿಗಳು; ದತ್ತು ಪಡೆಯಲು ಪ್ರಸ್ತುತದ ಕುಟುಂಬದ ಭಾವಚಿತ್ರ ಅಥವಾ ಛಾಯಾಚಿತ್ರ, ವೈಯಕ್ತಿಕ ಗುರುತಿನ ಪತ್ರ (ಪಾನ ಕಾರ್ಡ, ಆಧಾರ ಕಾರ್ಡ ಅಥವಾ ಜನನ ಪ್ರಮಾಣ ಪತ್ರ ಇತ್ಯಾದಿ), ಜನನ ಪ್ರಮಾಣ ಪತ್ರ ಅಥವಾ ಶಾಲಾ ದೃಡೀಕರಣ ಪತ್ರ. ವಿಳಾಸದ ಗುರುತಿನ ಪತ್ರ (ಮತದಾರರ ಗುರುತಿನ ಚೀಟಿ, ವಿದ್ಯುತ ಬಿಲ್ ಅಥವಾ ದೂರವಾಣಿ ಬಿಲ್ ಇತ್ಯಾದಿ), ವಾಸಸ್ಥಳ ಪ್ರಮಾಣ ಪತ್ರ. ಆದಾಯ ಪ್ರಮಾಣ ಪತ್ರ (ವೇತನ, ಆದಾಯ ಪ್ರಮಾಣ ಪತ್ರ ಅಥವಾ ಆದಾಯ ಪಾವತಿಸಿದ ದಾಖಲಾತಿಗಳು), ಮದುವೆ ನೊಂದಣಿ ಪ್ರಮಾಣ ಪತ್ರ. ಯಾವುದೇ ಮಾರಣಾಂತಿಕ ಕಾಯಿಲೆ ಅಥವಾ ರೋಗದಿಂದ ಬಳಲುತ್ತಿಲ್ಲದಿರುವ ಹಾಗೂ ದತ್ತು ಪಡೆಯಲು ಅರ್ಹರು ಎಂಬ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಪೊಲೀಸ್ ಪರಿಶೀಲನಾ ಪತ್ರ, ಸ್ವಯಂ ಘೋಷಣಾ ಪ್ರಮಾಣ ಪತ್ರ. ಶಿಫಾರಸ್ಸು ಪತ್ರ (ಹತ್ತಿರ ಸಂಬಂಧಿಕರು, ನೆರೆಹೊರೆಯವರು ಅಥವಾ ಗೆಳಯರ) ಈ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು.
ಭರಿಸಬೇಕಾಗಬಹುದಾದ ಶುಲ್ಕ; ಮಗುವನ್ನು ದತ್ತು ಪಡೆದುಕೊಳ್ಳಲು ಪೋಷಕರು ಭರಿಸಬೇಕಾಗಬಹುದಾದ ಶುಲ್ಕದ ವಿವರ ಇಂತಿದೆ. ರೂ. 6000 ಗೃಹ ಅಧ್ಯಯನ ಶುಲ್ಕ, ರೂ. 50 ಸಾವಿರ ದತ್ತು ಪಡೆದುಕೊಳ್ಳುವ ಶುಲ್ಕ ಮತ್ತು ರೂ. 2000 ಗಳ ಅನುಪಾಲನಾ ಶುಲ್ಕ.
ದತ್ತು ಕಾರ್ಯಕ್ರಮದ ವಿವರ; ಜಿಲ್ಲೆಯಲ್ಲಿ 2015 ರಿಂದ ಪ್ರಸ್ತುತದ ದತ್ತು ಕಾರ್ಯಕ್ರಮದ ವಿವರ ಇಂತಿದೆ. 2025ರ ಚಾಲ್ತಿ ಮಾಹೆಯರೆಗೆ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ 19 ಗಂಡು ಮತ್ತು 25 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 44 ಮಕ್ಕಳನ್ನು ಪಾಲಕರು ಅಥವಾ ಪೋಷಕರು ಒಪ್ಪಿಸಿರುತ್ತಾರೆ. 10 ಗಂಡು ಮತ್ತು 13 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 23 ಮಕ್ಕಳನ್ನು ಪಾಲಕರು, ಪೋಷಕರು ಪರಿತ್ಯಜಿಸಿರುತ್ತಾರೆ.
ಈ ರೀತಿಯಲ್ಲಿ ಒಟ್ಟು 67 ಮಕ್ಕಳನ್ನು ರಕ್ಷಿಸಿದ್ದು, ಅದರಲ್ಲಿ 4 ಗಂಡು ಮಕ್ಕಳು 4 ಹೆಣ್ಣು ಸೇರಿ ಒಟ್ಟು 8 ಚಿಕಿತ್ಸೆ ಹಾಗೂ ರಕ್ಷಿಸಲು ಸಾಕಷ್ಟು ಪ್ರಯತ್ನಿಸಿದ್ದಾಗಿಯೂ ಚಿಕಿತ್ಸೆ ಫಲಿಸದೇ ಮೃತಪಟ್ಟಿವೆ. 18 ಗಂಡು ಹಾಗೂ 26 ಹೆಣ್ಣು ಮಕ್ಕಳು ಸೇರಿ ಒಟ್ಟು 44 ಮಕ್ಕಳನ್ನು ದೇಶಿಯ ಪೋಷಕರಿಗೆ ಹಾಗೂ 2 ಗಂಡು ಮತ್ತು 7 ಹೆಣ್ಣು ಮಕ್ಕಳು ಸೇರಿ ಒಟ್ಟು 9 ಮಕ್ಕಳನ್ನು ವಿದೇಶಿ ಪೋಷಕರಿಗೆ ದತ್ತು ನೀಡಲಾಗಿದೆ. ಇದುವರೆಗೆ ಒಟ್ಟು 53 ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪ್ರಕ್ರಿಯೆಗೆ ಒಳಪಡಿಸಿದೆ.
ಬೇಡವಾದ ಮಕ್ಕಳನ್ನು ಮಗುವಿನ ಪಾಲಕರು, ಪೋಷಕರು ಎಲ್ಲೆಂದರಲ್ಲಿ ಬಿಟ್ಟು ಹೋಗುವುದು, ಅಂತಂಹ ಮಕ್ಕಳು ಪ್ರಾಣಿಗಳಿಗೆ ಆಹಾರವಾಗುವುದು ಅಥವಾ ಯಾರೋ ಕದ್ದೊಯ್ದು, ಸಲುಹಿ ನಂತರ ಮಕ್ಕಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣಗಳನ್ನು ಸರಕಾರವು ಗಮನಿಸಿ. ಮಗುವಿಗೆ ಸೂಕ್ತ ರಕ್ಷಣೆ, ಕೌಟುಂಬಿಕ ವ್ಯವಸ್ಥೆ, ಪ್ರೀತಿ, ವಾತ್ಸಲ್ಯಗಳನು ನೀಡುವ ಉದ್ದೇಶದಿಂದ ಇತಂಹ ಮಕ್ಕಳ ಪುನರವಸತಿಗಾಗಿ ಕಾನೂನುಬದ್ಧ ದತ್ತು ಕಾರ್ಯಕ್ರಮವನ್ನು ಜಾರಿಗೊಳಿಸಿದೆ.
ಮಕ್ಕಳ ನ್ಯಾಯ (ಮಕ್ಕಳ ಪೊಷಣೆ ಮತ್ತು ರಕ್ಷಣೆ) ಕಾಯ್ದೆ-2015ಯಲ್ಲಿ ಯಾರಾದರೂ ಬೇಡವಾದ ಅಥವಾ ಪರಿತ್ಯಜಿಸಿದ ಮಕ್ಕಳನ್ನು ‘ಮಕ್ಕಳ ಕಲ್ಯಾಣ ಸಮಿತಿ’ ವಶಕ್ಕೆ ನೀಡಬಹುದು ಅಥವಾ ಹತ್ತಿರದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ವಶಕ್ಕೆ ನೀಡಬಹುದು. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಬಹುದಾಗಿದೆ. ಈ ರೀತಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾದ ಮಕ್ಕಳನ್ನು ಸಮಿತಿಯು ತಾತ್ಕಾಲಿಕವಾಗಿ ಪೋಷಿಸಿ ಮಗು 2 ವರ್ಷದ ಒಳಗಡೆ ಇದಲ್ಲಿ 60 ದಿನಗಳು ಅಥವಾ ಮಗು 2 ವರ್ಷದ ಮೇಲ್ಪಟ್ಟಿದ್ದಲ್ಲಿ 120 ದಿನಗಳ ನಂತರ ದತ್ತು ಮುಕ್ತ ಆದೇಶವನ್ನು ಹೊರಡಿಸುತ್ತದೆ. ದತ್ತು ಕಾರ್ಯಕ್ರಮದ ಮೂಲಕ ಮಗುವನ್ನು ಅರ್ಹ ವ್ಯಕ್ತಿ/ದಂಪತಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದನ್ವಯ ಕಾನೂನುಬದ್ಧವಾಗಿ “ದತ್ತು” ನೀಡಲಾಗುತ್ತದೆ.
ಕಾನೂನು ಬಾಹಿರ ದತ್ತು ಪಡೆದಲ್ಲಿ ನಿಗದಿಪಡಿಸಿರುವ ಶಿಕ್ಷೆ ಹಾಗೂ ದಂಡನೆಗಳು: ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ-2021ರ ಕಲಂ 81 ರನ್ವಯ ಮಕ್ಕಳ ಮಾರಾಟ ಮಾಡುವುದು ಅಥವಾ ಕೊಳ್ಳುವುದು ಶಿಕ್ಷಾರ್ಹ ಅಪರಾಧ ಈ ಕೃತ್ಯಕ್ಕೆ 05 ರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ದಂಡ ತಪ್ಪಿದಲ್ಲ. ಈ ರೀತಿಯ ಕೃತ್ಯದಲ್ಲಿ ಶಾಮೀಲಾದ ಆಸ್ಪತ್ರೆ, ನರ್ಸಿಂಗ್ ಹೋಂ, ಹೆರಿಗೆ ಆಸ್ಪತ್ರೆಗಳ ಅಧಿಕಾರಿ, ಸಿಬ್ಬಂದಿಗಳಿಗೆ 3 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, ಕೊಪ್ಪಳ ದೂರವಾಣಿ ಸಂಖ್ಯೆ: 08539-225030, ಅಮೂಲ್ಯ (ಪಿ) ದತ್ತು ಸ್ವೀಕಾರ ಕೇಂದ್ರ, ಕೊಪ್ಪಳ ದೂ.ಸಂ: 7353780210 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್