
ವಿಜಯಪುರ, 12 ನವೆಂಬರ್ (ಹಿ.ಸ.)
ಆ್ಯಂಕರ್: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ ಜನರಲ್ಲಿ ಭಯ ಹುಟ್ಟಿಸಿದೆ. ಮಧ್ಯಾಹ್ನ 3.16ರ ಸುಮಾರಿಗೆ ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿದ ಅನುಭವ ದಾಖಲಾಗಿದೆ. ವಿಜಯಪುರ ನಗರ ಸೇರಿದಂತೆ ತಿಕೋಟ ತಾಲೂಕು, ಘೋಣಸಗಿ, ಕಳ್ಳಕವಟಗಿ, ಮರಬಗಿ, ದಾಸ್ಯಾಳ ಗ್ರಾಮಗಳಲ್ಲಿ ಜನರು ಕಂಪನವನ್ನು ಸ್ಪಷ್ಟವಾಗಿ ಅನುಭವಿಸಿದ್ದಾರೆ. ಕಂಪನದ ವೇಳೆ ಕೆಲವಡೆ ಮನೆಗಳು ನಡುಗಿದಂತಾಗಿ ಜನರು ಹೊರಗೆ ಓಡಿ ಬಂದಿದ್ದಾರೆ. ಸ್ಥಳೀಯರು ಹೇಳುವಂತೆ, ಮೊದಲು ಜೋರಾದ ಸದ್ದು ಕೇಳಿಬಂದಿದ್ದು ನಂತರ ಭೂಮಿ ಕಂಪಿದಂತೆ ಅನುಭವವಾಗಿದೆ. ಸಿಸಿ ಕ್ಯಾಮರಾಗಳಲ್ಲೂ ಈ ಭಯಾನಕ ಸದ್ದು ದಾಖಲಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಗಮನಾರ್ಹವಾಗಿ, ಕಳೆದ ಎರಡು ವರೆ ತಿಂಗಳಲ್ಲಿ 14ನೇ ಬಾರಿ ವಿಜಯಪುರ ಜಿಲ್ಲೆಯಲ್ಲಿಯೇ ಭೂಮಿ ಕಂಪಿದ ಘಟನೆ ಇದು. ಸರಣಿ ಭೂಕಂಪನದಿಂದ ಕಂಗೆಟ್ಟ ಜಿಲ್ಲೆ ಜನ ಇದೀಗ ಭದ್ರತಾ ಕ್ರಮ ಕೈಗೊಳ್ಳಲು ಆಡಳಿತದಿಂದ ಸ್ಪಷ್ಟ ಮಾಹಿತಿ ನಿರೀಕ್ಷಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande