
ವಿಜಯಪುರ, 12 ನವೆಂಬರ್ (ಹಿ.ಸ.)
ಆ್ಯಂಕರ್: ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ದಿ ಯೋಜನೆಗಳು ಯಶಸ್ವಿಯಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಬೇಡಿಕೆಗಳಿಗುಣವಾಗಿ ಜನರ ಶ್ರೇಯೋಭಿವೃದ್ದಿಯ ಕ್ರೀಯಾಯೋಜನೆಗಳನ್ನು ರೂಪಿಸುವ ಮೂಲಕ ಜನರ ಜೀವನಮಟ್ಟ ಸುಧಾರಣೆಗೆ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2025-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ದಿ ಯೋಜನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಭಿವೃದ್ದಿ ಯೋಜನೆಗಳನ್ನು ರೂಪಿಸುವಾಗ ಜನರ ಬೇಡಿಕೆಗಳಿಗೆ ಆದ್ಯತೆ ನೀಡಿ, ಅವರ ಬೇಡಿಕೆಗಳನ್ನು ಯೋಜನೆಗಳಲ್ಲಿ ಅಳವಡಿಸಬೇಕು. ಕಾಲಕಾಲಕ್ಕೆ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ಸ್ವೀಕರಿಸಿ ಜನರ ಶ್ರೇಯೋಭಿವೃದ್ದಿಗೆ ಯೋಜನೆಗಳನ್ನು ರೂಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್ ಅಭಿವೃದ್ದಿ ಸಮಿತಿಗಳ ಸಭೆಗಳನ್ನು ಆಯೋಜಿಸಿ 2026-27ನೇ ಸಲಿನ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಬೇಕು. ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಅಭಿವೃದ್ದಿಪಡಿಸಲು ಸಾಧ್ಯವಾಗುತ್ತದೆ. ನಮ್ಮ ಸಹಭಾಗಿತ್ವದಲ್ಲಿ ಎಂಬ ನಂಬಿಕೆ ಜನರಲ್ಲಿ ಮೂಡಿಸಿದಾಗ ಅಧಿಕಾರ ಯೋಜನೆಗಳ ವಿಕೇಂದ್ರೀಕರಣವಾಗಲು ಸಾಧ್ಯವಾಗುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆ ಸ್ವರೂಪ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜನರ ಸಹಭಾಗಿತ್ವಕ್ಕೆ ಪ್ರಾಮುಖ್ಯತೆ ನೀಡಬೇಕು. 2026-27 ನೇ ಸಾಲಿನಲ್ಲಿ ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್ ಅಭಿವೃದ್ದಿ ಸಮಿತಿಗಳ ಮೂಲಕ ಕ್ರೀಯಾ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ತಾಲೂಕಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳು ಕಾಲಕಕಾಲಕ್ಕೆ ಗ್ರಾಮ ಪಂಚಾಯತಿ ಸಭೆ ಮತ್ತು ಗ್ರಾಮ ಸಭೆಗಳಿಗೆ ಕಡ್ಡಾಯವಾಗಿ ಭಾಗವಹಿಸಬೇಕು. ಅಧಿಕಾರಿಗಳು ಸಭೆಗಳನ್ನು ಭಾಗವಹಿಸುವುದರಿಂದ ಸ್ಥಳೀಯ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅವರ ಸಮಸ್ಯೆಗಳಿಗುಣವಾಗಿ ಪರಿಹಾರ ದೊರಕಿಸಲು ಸಾಧ್ಯವಾಗುತ್ತದೆ. ತಾಲೂಕಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸಭೆಗಳನ್ನು ಕಾಲಕಾಲಕ್ಕೆ ನಡೆಸಬೇಕು. ಜನರ ಬೇಡಿಕೆಗಳಿಗೆ ಸ್ಪಂದಿಸುವ ಯೋಜನೆಗಳು- ರೂಪಿತಗೊಳ್ಳುವ ಯೋಜನೆಗಳು ದೀರ್ಘಕಾಲಿಕ ಯೋಜನೆಗಳಾಗಿರುವುದರಿಂದ ಜನರ ಬೇಡಿಕೆಗಳನ್ನು ಸಭೆಗಳ ಮೂಲಕ ಸಂಗ್ರಹಿಸಿ ಯೋಜನೆಗಳನ್ನು ರೂಪಿಸಬೇಕು. ಎಲ್ಲ ವರ್ಗದ ಜನರ ಸಮುದಾಯ ಜನರ ಬೇಡಿಕೆಗಳನ್ನು ಸಭೆಗಳಲ್ಲಿ ಚರ್ಚಿಸಿ ಸೇರ್ಪಡೆಗೊಳಿಸಬೇಕು. ಜಮೀನುಗಳಿಗೆ ಎತ್ತಿಗಾಡಿ ರಸ್ತೆಯ ಬೇಡಿಕೆಗಳನ್ನು ಆದ್ಯತೆ ನೀಡಿ ಯೋಜನೆಗಳಲ್ಲಿ ಅಳವಡಿಸಬೇಕು ಎಂದು ಅವರು ಹೇಳಿದರು.
ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಂಬರುವ ಜನವರಿ ನಾಲ್ಕನೇ ಭಾನುವಾರದಿಂದ ಪ್ರತಿ ತಿಂಗಳು ಹಳ್ಳಿ-ಹಳ್ಳಿಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಬೇಕು. ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ಮತ್ತು ಶುಚಿತ್ವದ ಕುರಿತು ಜನರನ್ನು ಪ್ರೇರೇಪಿಸಬೇಕು. ಜನರ ಭಾವನೆಗಳನ್ನು ಗೌರವಿಸುವ ಮೂಲಕ ಅವರ ಬೇಡಿಕೆಗಳನ್ನು ಸ್ಪಂದಿಸಿದಾಗ ಮಾತ್ರ ಗ್ರಾಮೀಣರ ಅಭ್ಯುದಯವಾಗುತ್ತದೆ. ನಮಗೆ ದೊರಕಿರುವ ಸ್ಥಾನಮಾನವನ್ನು ಜನರ ಪ್ರಗತಿ ಬಳಸಿಕೊಂಡಾಗ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಅಪಾರ ಅನುಭವ ಹೊಂದಿರುತ್ತಾರೆ. ತಮ್ಮ ಆನುಭವಗಳನ್ನು ಸಾಮಾನ್ಯ ಜನರ ಆಶಯದ ನೆಲೆಗಟ್ಟಿನ ಆಧಾರದಲ್ಲಿ ಕ್ರೀಯಾಯೋಜನೆ ರೂಪಿಸಿದ್ದಲ್ಲಿ ಜಿಲ್ಲೆಯನ್ನು ಪ್ರಗತಿಪಥದತ್ತ ಕೊಂಡೊಯ್ಯಬಹುದಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.
ಮಹಾತ್ಮ ಗಾಂಧೀಜಿಯವರ ಸ್ವರಾಜ್ ಕನಸು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ದಿಸೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ. ಜನರನ್ನು ಸಬಲರನ್ನಾಗಿಸಲು ಕ್ರೀಯಾಯೋಜನೆಗಳು ಅತ್ಯಂತ ಮಹತ್ವದ್ದಾಗಿದೆ ಹಾಗಾಗಿ ಗ್ರಾಮ ಪಂಚಾಯತ್ ತಾಲೂಕಾ ಪಂಚಾಯತ್ ಅಭಿವೃದ್ದಿ ಸಮಿತಿ ಸಭೆಗಳನ್ನು ನಡೆಸಿ, ನ.30 ರೊಳಗೆ ಸಮಿತಿಗೆ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಸಕ್ಕರೆ, ಕಬ್ಬು ಅಭಿವೃದ್ದಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಮಾತನಾಡಿ, ಕೃಷಿ ಅಧಿಕಾರಿಗಳು ಮಣ್ಣು ಫಲವತ್ತತೆ ಕುರಿತು ರೈತರಿಗೆ ಅಗತ್ಯ ಸಲಹೆ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳು ರೈತರೊಂದಿಗೆ ಒಡನಾಟ ಹೊಂದಬೇಕು. ಇದರಿಂದ ಅವರ ಸಮಸ್ಯೆಗಳನ್ನು ಅರಿತಾಗ ಮಾತ್ರ ಪರಿಹರಿಸಲು ಅನುಕೂಲವಾಗುತ್ತದೆ. ಪ್ರತಿ ಹಳ್ಳಿ-ಹಳ್ಳಿಗಳಲ್ಲಿ ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸಬೇಕು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸರ್ಕಾರ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರೂ ಸಹ ಕಳಪೆ ಫಲಿತಾಂಶ ಬರಲು ಇರುವ ಮುಖ್ಯ ಕಾರಣ ಗುರುತಿಸಿ, ಸುಧಾರಣೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಅನೇಕ ಉತ್ತಮ ಶಿಕ್ಷಕರಿದ್ದಾರೆ ಇಂತಹವರನ್ನು ಗುರುತಿಸಿ ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಗ್ರಾಮೀಣರ ಆರೋಗ್ಯಕ್ಕಾಗಿ ಆರೋಗ್ಯ ಯೋಜನೆಗಳನ್ನು ರೂಪಿಸಬೇಕು. ಸೂಪರ್ ಸ್ಪೇಶಾಲಿ ಆಸ್ಪತ್ರೆ ಜನಬಳಕೆಗೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಬಾಕಿ ಇರುವ ಕಾಮಗಾರಿಗಳ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಡೆಯುವ ಗ್ರಾಮ ಸಭೆಗಳಿಗೆ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಹಾಜರಾಗಿ ತೋಟಗಾರಿಕೆ ಬೆಳೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಇತ್ತೀಚೆಗೆ ದಾಳಿಂಬೆ ಬೆಳೆ ಕಡಿಮೆಯಾಗುತ್ತಿದ್ದು, ಈ ಕುರಿತು ಕೃಷಿ ಅಧಿಕಾರಿಗಳು ಗಮನ ಹರಿಸಬೇಕು ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಷಿಕ ಕರಡು ಅಭಿವೃದ್ದಿ ಯೋಜನೆಗಳನ್ನು ಜನರ ಬೇಡಿಕೆಯನುಸಾರ ರೂಪಿಸಬೇಕು. ವಾರ್ಡ ಸಭೆ, ಏರಿಯಾ ಸಭೆ ಕಾಲಕಾಲಕ್ಕೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಚುರುಕುಗೊಳಿಸುವ ಕಾರ್ಯ ಮಾಡುತ್ತಿದೆ. ಈ ಸಮಿತಿ ಆಶಯಗಳಿಗುಣವಾಗಿ ಕೆಲಸ ನಿರ್ವಹಿಸೋಣ. ಈ ಸಮಿತಿ ಮತ್ತೆ ಏಪ್ರಿಲ್‍ನಲ್ಲಿ ಜಿಲ್ಲೆಗೆ ಬರಲಿದ್ದು, ಇಂದು ಚರ್ಚಿಸಿದ ವಿಷಯಗಳ ಕುರಿತು ಗಮನ ಹರಿಸಿ ಪ್ರಗತಿ ಸಾಧಿಸಲು ಶ್ರಮಿಶೋಣ ಎಂದು ಅವರು ಹೇಳಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಂಬಂಧಿಸಿದವರ ಸಭೆ ನಡೆಸಬೇಕು. ಪ್ರತಿ ತಾಲೂಕಾ, ಗ್ರಾಮ ಪಂಚಾಯತ್ ಶೈಕ್ಷಣಿಕ ಸುಧಾರಣೆ ವ್ಯವಸ್ಥೆಗೆ ಕ್ರಮ ವಹಿಸಬೇಕು. ಕಾಲಕಾಲಕ್ಕೆ ಸಭೆ ನಡೆಸುವುದರಿಂದ ಮಕ್ಕಳ ಪಾಲಕರಲ್ಲಿ ತಿಳುವಳಿಕೆ ಮೂಡುತ್ತದೆ. ಅಧಿಕಾರಿಗಳು ಶಾಲೆಗಳಿಗೆ ಧಿಢೀರ ಭೇಟಿ ನೀಡಿ ಮಕ್ಕಳ ಹಾಜರಾತಿ, ಶೈಕ್ಷಣಿಕ ಪ್ರಗತಿ, ಕುರಿತು ಪರಿಶೀಲನೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿಯಲು ಇರುವ ಕಾರಣವನ್ನು ಕಂಡು ಹಿಡಿದು ಪರಿಹಾರ ಬೋಧನೆಗೆ ಕ್ರಮ ವಹಿಸಬೇಕು. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಶಿಕ್ಷಕರ ಜವಾಬ್ದಾರಿ ಮಾತ್ರವಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳದ್ದು ಆಗಿರುತ್ತದೆ. ಅಧಿಕಾರಿಗಳು ಶಿಕ್ಷಕರನ್ನು ಪ್ರೊತ್ಸಾಹಿಸುವ ಮೂಲಕ ಶೈಕ್ಷಣಿಕ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಮಾತನಾಡಿ, ಜಿಲ್ಲೆಯಲ್ಲಿ ಸ್ಮಶಾನ ಭೂಮಿ ಅವಶ್ಯವಿದ್ದೆಡೆ ಜಮೀನು ಒದಗಿಸಲಾಗುತ್ತಿದೆ. ಸರ್ಕಾರಿ ಜಮೀನು ಲಭ್ಯವಿರದೇ ಇದ್ದಲ್ಲಿ ಈಗಾಗಲೇ ಖಾಸಗಿ ಖರೀದಿಸಿ ಒದಗಿಸಲಾಗುತ್ತಿದೆ. ಶೈಕ್ಷಣಿಕ ಗುಣಮಟ್ಟ ಮತ್ತು ಫಲಿತಾಂಶ ಸುಧಾರಣೆಗೆ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಬೇಕು. ನಿರಂತರ ಹಾಜರಾಗುವ ಮಕ್ಕಳ ಬಗ್ಗೆ ನಾವು ಗಮನ ಹರಿಸಬೇಕು. ಶೈಕ್ಷಣಿಕ ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಸ್ವಚ್ಛತಾ ಶನಿವಾರ ಅಭಿಯಾನ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಭೆಯಲ್ಲಿ ಚರ್ಚಿಸಲಾದ ಅಂಶಗಳ ಆಧಾರದ ಮೇಲೆ ಕಾಲಮಿತಿಯೊಳಗೆ ವರದಿಯನ್ನು ಕ್ರೋಢೀಕರಿಸಿ ಸಮಿತಿಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ, ಗ್ರಾಮ ಪಂಚಾಯತ್ ಸದಸ್ಯರ ರಾಜ್ಯ ಒಕ್ಕೂಟದ ಅಧ್ಯಕ್ಷರಾದ ಸತೀಶ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ವಿ.ಕುಂಬಾರ, ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande