
ಗದಗ, 12 ನವೆಂಬರ್ (ಹಿ.ಸ.)
ಆ್ಯಂಕರ್:
ಗದಗ ತಾಲೂಕಿನ ಕಣಗಿನಾಳ ಗ್ರಾಮದ ಹರ್ಲಾಪುರ ರಸ್ತೆಯ ಸಮೀಪದ ಈಶಪ್ಪ ಕುರಿಯವರ ಜಮೀನಿನಲ್ಲಿ ಪತ್ತೆಯಾದ ಅಜ್ಞಾತ ವ್ಯಕ್ತಿಯ ಶವ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಬೆತ್ತಲೆ ಸ್ಥಿತಿಯಲ್ಲಿದ್ದ ಶವವು ನೀರು ನಿಂತಿದ್ದ ಬಾಂದಾರ ತೆಗ್ಗಿನಲ್ಲಿ ಪತ್ತೆಯಾಗಿದೆ.
ಮೃತನ ವಯಸ್ಸು ಸುಮಾರು 35ರಿಂದ 40 ವರ್ಷಗಳಷ್ಟಾಗಿದ್ದು, ಕೈಗಳನ್ನು ಒಳುಡುಪಿನಿಂದ ಹಾಗೂ ಕಾಲುಗಳನ್ನು ಪ್ಯಾಂಟಿನಿಂದ ಕಟ್ಟಿರುವುದು ಗಮನಕ್ಕೆ ಬಂದಿದೆ. ಜೊತೆಗೆ ತಲೆಯ ಭಾಗ ಹಾಗೂ ಗದ್ದ ಹತ್ತಿರ ಗಂಭೀರ ಗಾಯದ ಗುರುತುಗಳು ಕಂಡುಬಂದಿರುವುದರಿಂದ, ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈಶಪ್ಪ ಕುರಿಯವರು ಜಮೀನಿಗೆ ನೀರು ಬಿಟ್ಟಾಗ ಶವ ಕಾಣಿಸಿಕೊಂಡಿದ್ದು, ತಕ್ಷಣ ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಶವ ಪರಿಶೀಲನೆ ನಡೆಸಿದರು. ಶವ ಸಂಪೂರ್ಣವಾಗಿ ಉಬ್ಬಿಹೋಗಿದ್ದರಿಂದ ಗುರುತಿಸಲು ಸಾಧ್ಯವಾಗಿಲ್ಲ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಆಗಮಿಸಿ ಘಟನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತನಿಖಾಧಿಕಾರಿಗಳು ಪಾದಚಿಹ್ನೆ, ಶವದ ಸ್ಥಿತಿ ಹಾಗೂ ಸುತ್ತಮುತ್ತಲಿನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಮೃತನ ಗುರುತು ಪತ್ತೆಹಚ್ಚುವ ಕಾರ್ಯ ಜಾರಿಯಲ್ಲಿದೆ. ಸುತ್ತಮುತ್ತಲಿನ ಠಾಣೆಗಳಲ್ಲಿ ಕಾಣೆಯಾದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಘಟನೆಯಿಂದ ಕಣಗಿನಾಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರು ಜನರಿಗೆ ಯಾರಾದರೂ ಕಾಣೆಯಾದವರ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ಠಾಣೆಗೆ ತಿಳಿಸಲು ವಿನಂತಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP