
ಮುಂಬಯಿ, 12 ನವೆಂಬರ್ (ಹಿ.ಸ.) :
ಆ್ಯಂಕರ್ : ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಅವರನ್ನು ಮುಂಬೈನ ಕ್ರಿಟಿಕಲ್ ಕೇರ್ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ನಟ ಮನೆಯಲ್ಲಿ ಇದ್ದಾಗಲೇ ಅಸಹಜವಾಗಿ ಕುಸಿದುಬಿದ್ದು ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಕುಟುಂಬದವರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಆಸ್ಪತ್ರೆಯ ವೈದ್ಯರ ತಂಡವು ಗೋವಿಂದ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡಿವೆ. ಅಂತಿಮ ವರದಿಗಳು ಇನ್ನೂ ಬಾಕಿ ಇರುವುದಾಗಿ ತಿಳಿದುಬಂದಿದೆ. ಅವರ ವಕೀಲ ಹಾಗೂ ಆಪ್ತ ಸ್ನೇಹಿತ ಲಲಿತ್ ಬಿಂದಾಲ್ ಅವರು ನಟನ ಆರೋಗ್ಯ ಕುರಿತು ಮಾಹಿತಿ ನೀಡಿದ್ದು, “ಗೋವಿಂದ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ, ವೈದ್ಯರು ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಗೋವಿಂದ ಅವರ ಅನಾರೋಗ್ಯದ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನಟ ಗೋವಿಂದ ಇತ್ತೀಚೆಗೆ ತಮ್ಮ ಹೊಸ ಸಿನಿಮಾ ದುನಿಯಾದಾರಿಗೆ ಸಿದ್ಧತೆ ನಡೆಸುತ್ತಿದ್ದರು. ಅವರು ಕೊನೆಯ ಬಾರಿಗೆ 2019ರಲ್ಲಿ ಬಿಡುಗಡೆಯಾದ “ರಂಗೀಲಾ ರಾಜ” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa