
ನವದೆಹಲಿ, 12 ನವೆಂಬರ್ (ಹಿ.ಸ.) :
ಆ್ಯಂಕರ್ : ಜೈವಿಕ ಇಂಧನ ಆಧಾರಿತ ಹೈಡ್ರೋಜನ್ ಪೈಲಟ್‌ಗಳಿಗೆ ₹100 ಕೋಟಿ ಮೌಲ್ಯದ ಪ್ರಸ್ತಾವನೆ ಆಹ್ವಾನಿಸಲಾಗುತ್ತದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ.
ನವದೆಹಲಿಯ ಭಾರತ್ ಮಂಟಪದಲ್ಲಿ ಮಂಗಳವಾರ ನಡೆದ 3ನೇ ಅಂತರಾಷ್ಟ್ರೀಯ ಹಸಿರು ಹೈಡ್ರೋಜನ್ ಸಮ್ಮೇಳನದ (ICGH 2025) ಉದ್ದೇಶಿಸಿ ಮಾತನಾಡಿ, ಜೀವರಾಶಿ ಮತ್ತು ತ್ಯಾಜ್ಯ ವಸ್ತುಗಳಿಂದ ಹಸಿರು ಹೈಡ್ರೋಜನ್ ಉತ್ಪಾದಿಸಲು ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಪೈಲಟ್ ಯೋಜನೆಗಳಿಗಾಗಿ ಈ ₹100 ಕೋಟಿ ಪ್ರಸ್ತಾವನೆಗಳನ್ನು ಕರೆಯಲಾಗುತ್ತದೆ ಎಂದು ಹೇಳಿದರು.
ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಈಗಾಗಲೇ ₹100 ಕೋಟಿ ಮಂಜೂರು ಮಾಡಿದ್ದು, ಇದರ ಜತೆಗೆ ಈ ಪೈಲಟ್‌ಗಳಿಗೆ ಒಟ್ಟು ₹100 ಕೋಟಿ ಹಂಚಿಕೆ ಮಾಡಲಾಗಿದೆ. ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಉತ್ತೇಜಿಸಲು ಈ ಯೋಜನೆಯನ್ನು BIRAC (ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯ ಮಂಡಳಿ) ಮೂಲಕ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಭಾರತದ ಶುದ್ಧ ಇಂಧನ ಬದಲಾವಣೆಯನ್ನು ವೇಗಗೊಳಿಸುತ್ತಿದೆ ಮತ್ತು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಹೆಚ್ಚು ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುತ್ತಿದೆ ಎಂದರು.
ಇದೇ ವೇಳೆ ಸಚಿವ ಪ್ರಲ್ಹಾದ ಜೋಶಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (NGHM)ನ ಅಧಿಕೃತ ಲೋಗೋ ಬಿಡುಗಡೆ ಮಾಡಿದರು. ದೇಶಾದ್ಯಂತ 2,500ಕ್ಕೂ ಹೆಚ್ಚು ನಮೂದುಗಳಿಂದ ಆಯ್ಕೆ ಮಾಡಲಾದ ಹೊಸ NGHM ಲೋಗೋ ಭಾರತದ ಹಸಿರು ಪ್ರಯಾಣದಲ್ಲಿ ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಹಸಿರು ಹೈಡ್ರೋಜನ್ ಹೊಸ ನಾಗರಿಕತೆಯ ಇಂಧನವಾಗಿದೆ. ದೇಶೀಯ ಎಲೆಕ್ಟ್ರೋಲೈಸರ್ ವಾರ್ಷಿಕ 3,000 MW ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯ ವಾರ್ಷಿಕ 8.62 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಭಾರತವೀಗ 7.24 ಲಕ್ಷ MTPA ಉತ್ಪಾದನೆಗೆ ಪ್ರತಿ ಕೆಜಿಗೆ ₹49.75ರಂತೆ ವಿಶ್ವದ ಅತ್ಯಂತ ಕಡಿಮೆ ಹಸಿರು ಅಮೋನಿಯಾ ಬೆಲೆಯನ್ನು ದಾಖಲಿಸಿದೆ ಎಂದು ತಿಳಿಸಿದರು.
ಹಸಿರು ಉಕ್ಕಿನ 5 ಪೈಲಟ್ ಯೋಜನೆಗಳಲ್ಲಿ ₹132 ಕೋಟಿ ಹೂಡಿಕೆ ಮಾಡಲಾಗಿದೆ. 37 ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ಮತ್ತು 9 ಇಂಧನ ತುಂಬುವ ಕೇಂದ್ರಗಳಿಗೆ ₹208 ಕೋಟಿ ಮಂಜೂರು ಮಾಡಲಾಗಿದೆ ಮತ್ತು VO ಚಿದಂಬರನಾರ್ ಬಂದರಿನಲ್ಲಿ ದೇಶದ ಮೊದಲ ಹೈಡ್ರೋಜನ್ ಬಂಕರಿಂಗ್ ಮತ್ತು ಇಂಧನ ತುಂಬುವ ಸೌಲಭ್ಯಕ್ಕಾಗಿ ₹35 ಕೋಟಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
NGHM ₹8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯನ್ನು ಒಟ್ಟುಗೂಡಿಸುತ್ತದೆ. 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಪಳೆಯುಳಿಕೆ-ಇಂಧನ ಆಮದುಗಳಲ್ಲಿ ವಾರ್ಷಿಕವಾಗಿ ₹1 ಲಕ್ಷ ಕೋಟಿ ಉಳಿಸುತ್ತದೆ ಎಂದು MNRE ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಹೇಳಿದರು.
ಸಮ್ಮೇಳನದಲ್ಲಿ ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಕೆ.ಸೂದ್, ಹೈಡ್ರೋಜನ್ ಯುರೋಪ್‌ನ ಸಿಇಒ ಜೋರ್ಗೊ ಚಾಟ್ಜಿಮಾರ್ಕಕಿಸ್ ಮತ್ತು ಎಸ್‌ಇಸಿಐ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ತ್ರಿಪಾಠಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa