क्षेत्रीय

Blog single photo

ಸ್ವಾತಂತ್ರ್ಯ ದಿನ ಆಚರಣೆ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

18/07/2019

ಸ್ವಾತಂತ್ರ್ಯ ದಿನ ಆಚರಣೆ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ, ಜು.18 (ಹಿ.ಸ) - ಜಿಲ್ಲಾಡಳಿತದ
ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಗಸ್ಟ್ 15ರಂದು ನಗರದಲ್ಲಿ ಆಚರಿಸಲಿರುವ ಸ್ವಾತಂತ್ರೋತ್ಸವ
ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು.



ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಇಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.



ಎಂದಿನಂತೆ ನಗರದ ಡಾ. ಬಿ.ಆರ್. ಅಂಬೇಡ್ಕರ್
ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ಹಾಗೂ ಸುತ್ತಮುತ್ತಲ ಆವರಣದ
ನೈರ್ಮಲ್ಯ ಕೆಲಸವನ್ನು ನಗರಸಭೆ ಶೀಘ್ರವೇ ಆರಂಭಿಸಬೇಕು. ನೀರು ಸಿಂಪಡಿಸಿ ಕಾರ್ಯಕ್ರಮಕ್ಕೆ ಕ್ರೀಡಾಂಗಣವನ್ನು
ಸಿದ್ಧಪಡಿಸುವ ಕೆಲಸ ಮುಂಚಿತವಾಗಿಯೇ ಪೂರ್ಣಗೊಳಿಸಿರಬೇಕು ಎಂದರು.



ನಾಗರಿಕರು, ಗಣ್ಯರು, ಮಕ್ಕಳಿಗೆ ನೆರಳಿಗಾಗಿ
ಉತ್ತಮ ಶಾಮಿಯಾನ ಹಾಗೂ ಆಸನಗಳ ವ್ಯವಸ್ಥೆ ಮಾಡಬೇಕು. ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಬೇಕು.
ಹೂವಿನ ಅಲಂಕಾರ ಸೇರಿದಂತೆ ಇತರೆ ಸಿದ್ಧತೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ
ತಿಳಿಸಿದರು.



ಆಕರ್ಷಕ ಪಥ ಸಂಚಲನಕ್ಕಾಗಿ ಶಾಲಾ ತಂಡಗಳನ್ನು
ಆಯ್ಕೆ ಮಾಡಬೇಕು. ಅಲ್ಲದೆ ಮಕ್ಕಳಿಂದ ಸ್ವಾತಂತ್ರ್ಯ ದಿನ ಆಚರಣೆಯ ಮಹತ್ವ ಸಂದೇಶ ಸಾರುವ ಆಕರ್ಷಕ ಕಾರ್ಯಕ್ರಮವನ್ನು
ಆಯೋಜಿಸಬೇಕು. ಸಂಜೆ ಚಾಮರಾಜೇಶ್ವರ ದೇವಾಲಯ ಬಳಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲು
ಕನ್ನಡ ಸಂಸ್ಕತಿ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ
ತಿಳಿಸಿದರು.



ಪಥಸಂಚಲನ, ಸಾಂಸ್ಕತಿಕ ಕಾರ್ಯಕ್ರಮಗಳ ತಾಲೀಮು
ನಡೆಸಲು ವಿದ್ಯಾರ್ಥಿಗಳಿಗೆ ಸೂಕ್ತ ಸಮಯ ನಿಗದಿ ಮಾಡಬೇಕು. ಯಾವುದೇ ತೊಂದರೆಯಾಗದಂತೆ ತಾಲೀಮು ಸಂದರ್ಭದಲ್ಲೂ
ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.



ಕಾರ್ಯಕ್ರಮ ಸುಗಮ ನಿರ್ವಹಣೆಗೆ ವಿವಿಧ ಸಮಿತಿಗಳನ್ನು
ರಚಿಸಲಾಗಿದೆ. ಸಮಿತಿಯಲ್ಲಿರುವ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ
ಸೂಕ್ತ ನಿರ್ದೇಶನ ನೀಡಬೇಕು. ಯಾವುದೇ ಲೋಪಕ್ಕೆ ಅವಕಾಶವಾಗದಂತೆ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು
ಪ್ರತಿ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.



ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳ ಮುಖಂಡರು
ಪ್ಲಾಸ್ಟಿಕ್ ಧ್ವಜಗಳ ಬಳಕೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಕಾರ್ಯಕ್ರಮಗಳಿಗೆ ಸರ್ಕಾರಿ
ಶಾಲೆಯ ಮಕ್ಕಳಿಗೆ ಆದ್ಯತೆ ನೀಡಬೇಕು. ಬ್ಯಾಂಕುಗಳು ಸೇರಿದಂತೆ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು.
ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆಯಾಗಬೇಕು ಎಂಬ ಸಲಹೆಗಳನ್ನು ನೀಡಿದರು.



ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ
ಮುಖಂಡರು ನೀಡಿರುವ ಸಲಹೆಗಳನ್ನು ಪರಿಗಣಿಸಲಾಗುವುದು. ಸ್ವಾತಂತ್ರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ
ನಿಟ್ಟಿನಲ್ಲಿ ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.



ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್,
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಅಟ್ಟಣ್ಣನವರ್, ಸಂಘಟನೆಗಳ ಮುಖಂಡರಾದ ಶಾ. ಮುರಳಿ,
ಚಾ.ರಂ. ಶ್ರೀನಿವಾಸಗೌಡ, ಅರಕಲವಾಡಿ ನಾಗೇಂದ್ರ, ನಿಜಧ್ವನಿ ಗೋವಿಂದರಾಜು, ಚಾ.ಗು. ನಾಗರಾಜು, ಜಿ.
ಬಂಗಾರು, ಶಿವಣ್ಣ, ಬ್ಯಾಡಮೂಡ್ಲು ಬಸವಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ
ಎಚ್. ಚನ್ನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



ಹಿಂದೂಸ್ಥಾನ ಸಮಾಚಾರ/ಎಂಪಿಎಸ್/ಎಂಸ್/ಯಮ


 
Top