अंतरराष्ट्रीय

Blog single photo

ಪಾಕಿಸ್ತಾನದಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಹಫೀಜ್ ಸಯೀದ್ ನ ಬಂಧನ

17/07/2019


ಇಸ್ಲಾಮಾಬಾದ್, ಜು.17 (ಹಿ.ಸ) - ಪ್ರಮುಖ ಬೆಳವಣಿಗೆಯಲ್ಲಿ ಮುಂಬೈ ಉಗ್ರ ದಾಳಿ ರೂವಾರಿ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.  ಅಲ್ಲದೆ, ಆತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ವರದಿಯಾಗಿದೆ. 
ಈ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದು, ಹಫೀಜ್ ಸಯೀದ್ ಮತ್ತು ಆತನ ನೇತೃತ್ವದ ಲಷ್ಕರ್ ಸಂಘಟನೆಗಳ ವಿರುದ್ಧ ದಾಖಲಾಗಿರುವ ಸುಮಾರು 23 ಉಗ್ರ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ನಿನ್ನೆಯಷ್ಟೇ ಉಗ್ರರಿಗೆ ನೆರವು ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.  ಮೂಲಗಳ ಪ್ರಕಾರ ಉಗ್ರ ಹಫೀಜ್ ಸಯೀದ್ ಮತ್ತು ಆತನ ಸಹಚರರಾದ ಅಮೀರ್ ಹಮ್ಜಾ, ಮಲ್ಲಿಕ್ ಜಾಫರ್ ಮತ್ತು ಹಫೀಜ್ ಮಸೂದ್ ಗೆ ತಲಾ 50 ಸಾವಿರ ರೂಪಾಯಿ ಭದ್ರತಾ ಬಾಂಡ್ ಪಡೆದು ಕೋರ್ಟ್ ಆಗಸ್ಟ್ 31ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ.  ಜೆಯುಡಿ ಸಂಘಟನೆ ಮದರಸಾ ಅಥವಾ ಧಾರ್ವಿುಕ ಕೇಂದ್ರಕ್ಕೆ ಭೂಮಿಯನ್ನು ಅಕ್ರಮವಾಗಿ ಉಪಯೋಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಉಗ್ರ ಮಸೂದ್ ಮತ್ತು ಬಾಲಾಕೋಟ್ ಉಗ್ರ ಶಿಬಿರ ಸೇರಿದಂತೆ ಆತನ ಉಗ್ರ ಚಟುವಟಿಕೆಗಳ ಬಗ್ಗೆ ಡಾಸಿಯರ್ ಒಂದನ್ನು ಈ ಹಿಂದೆ ಸ್ವತಃ ವಿಶ್ವಸಂಸ್ಥೆ ಸಿದ್ಧಪಡಿಸಿತ್ತು. ಇಂತಹುದೇ ಡಾಸಿಯರ್ ಒಂದನ್ನು ಇದೀಗ ಭಾರತ ಸರ್ಕಾರ ಕೂಡ ಸಿದ್ಧ ಪಡಿಸಿದ್ದು, ಈ ಡಾಸಿಯರ್ ಅನ್ನು ಪಾಕ್ ಸರ್ಕಾರಕ್ಕೆ ಹಸ್ತಾಂತರಿಸಿದೆ. ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ಮತ್ತು 44 ಮಂದಿ ಯೋಧರ ಧಾರುಣ ಸಾವಿಗೆ ಕಾರಣವಾದ ಪುಲ್ವಾಮಾ ಉಗ್ರ ದಾಳಿ ಸಂಪೂರ್ಣ ವಿವರಗಳನ್ನು ಭಾರತ ಸರ್ಕಾರ ತನ್ನ ಡಾಸಿಯರ್ ನಲ್ಲಿ ಅಳವಡಿಸಿದೆ. ಜೊತೆಗೆ ಪುಲ್ವಾಮಾ ಸಾಕ್ಷ್ಯಾಧಾರಗಳನ್ನೂ ಕೂಡ ಡಾಸಿಯರ್ ನಲ್ಲಿ ಲಗತ್ತಿಸಿತ್ತು. 
ಈ ಮಹತ್ವದ ದಾಖಲೆಯನ್ನು ಕೇಂದ್ರ ವಿದೇಶಾಂಗ ಇಲಾಖೆ ಅಧಿಕೃತವಾಗಿ ಪಾಕಿಸ್ತಾನ ಸರ್ಕಾರಕ್ಕೆ ರವಾನೆ ಮಾಡಿರುವುದರಿಂದ ಇದೀಗ ಪಾಕಿಸ್ತಾನ ಸರ್ಕಾರ ಈ ಡಾಸಿಯರ್ ಅನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಇದನ್ನು ಪಾಕ್ ಸರ್ಕಾರ ನಿರ್ಲಕ್ಷಿಸಿದ್ದೇ ಆದಲ್ಲಿ ಅದು ವಿಶ್ವಸಂಸ್ಥೆ ಮೆಟ್ಟಿಲೇರಲಿದೆ. ಈ ಭಯ ಇದೀಗ ಖಂಡಿತ ಪಾಕಿಸ್ತಾನಕ್ಕೆ ಇರಲಿದೆ.


 
Top