अंतरराष्ट्रीय

Blog single photo

ನೇಪಾಳ - ಮಳೆ ಪ್ರವಾಹ, ಮೃತಪಟ್ಟವರ ಸಂಖ್ಯೆ 88 ಕ್ಕೆ ಏರಿಕೆ

18/07/2019


 
ಕಠ್ಮಂಡು, ಜು.18 (ಹಿ.ಸ) -  ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಇಂದು 88ಕ್ಕೆ ಏರಿಕೆಯಾಗಿದೆ. ಇನ್ನೂ 31ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ನೇಪಾಳದಾದ್ಯಂತ ಭಾರಿ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ಸಂಭವಿಸಿದ ನಾನಾ  ದುರಂತಗಳಲ್ಲಿ ಈವರೆಗೂ 88 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಇನ್ನು 31 ಮಂದಿ ನಾಪತ್ತೆಯಾಗಿದ್ದು, ಈವರೆಗಿನ ರಕ್ಷಣಾ ಕಾರ್ಯಾಚರಣೆಯಲ್ಲಿ 3,366 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೇಪಾಳ ಗೃಹ ಸಚಿವಾಲಯ, ಪ್ರವಾಹ ಮತ್ತು ಭೂ ಕುಸಿತ ಸೇರಿದಂತೆ ನೇಪಾಳದಲ್ಲಿ ಸಂಭವಿಸಿದ ನಾನಾ ಮಳೆ ಸಂಬಂಧಿತ ದುರಂತಗಳಲ್ಲಿ 88 ಮಂದಿ ಸಾವಿಗೀಡಾಗಿದ್ದಾರೆ. 31 ಮಂದಿ ನಾಪತ್ತೆಯಾಗಿದ್ದು ಮತ್ತಷ್ಟು ನಾಪತ್ತೆಯಾದವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. 
ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮುಳುಗಡೆ ಪ್ರದೇಶಗಳಲ್ಲಿ ವಾಸವಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ನೂರಾರು ಗಂಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಹಾರ ಮತ್ತು ಬಟ್ಟೆಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಕಠ್ಮಂಡು ಸೇರಿದಂತೆ ನೇಪಾಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಕಳೆದವಾರ ಒಂದೇ ದಿನ 100 ಮೀ.ಮೀ ಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.  2008ರ ಬಳಿಕ ಇದೇ ಮೊದಲ ಬಾರಿಗೆ ಕೋಸಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದ್ದು, ಎಲ್ಲಾ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ


 
Top