खेल

Blog single photo

2023 ವಿಶ್ವಕಪ್ ಅತಿಥ್ಯ ವಹಿಸಲಿದೆ ಭಾರತ

17/07/2019

2023 ವಿಶ್ವಕಪ್ ಅತಿಥ್ಯ ವಹಿಸಲಿದೆ ಭಾರತ 
ಮುಂಬೈ, ಜು.17 (ಹಿ.ಸ) -  ಈ ಬಾರಿ ಆತಿಥ್ಯ ವಹಿಸಿದ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲುವ ಮೂಲಕ ಮೊದಲ ಸಲ ಚಾಂಪಿಯನ್‌ ಆಗಿದೆ. ಈ ಹಿಂದಿನ ಎರಡು ವಿಶ್ವಕಪ್‌ ಕೂಟದ ಆತಿಥ್ಯ ವಹಿಸಿದ ರಾಷ್ಟ್ರಗಳೇ ಪ್ರಶಸ್ತಿ ಜಯಿಸಿದ್ದವು.  2011ರಲ್ಲಿ ಭಾರತ ಮತ್ತು 2015ರಲ್ಲಿ ಆಸ್ಟ್ರೇಲಿಯ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದವು.
ಇನ್ನು ಮುಂದಿನ ವಿಶ್ವಕಪ್‌ ಸಂಭ್ರಮಕ್ಕಾಗಿ ನಾಲ್ಕು ವರ್ಷ ಕಾಯಬೇಕಾಗಿದೆ.  2023ರ ವಿಶ್ವಕಪ್‌ನ ಆತಿಥ್ಯವನ್ನು ಭಾರತ ವಹಿಸಲಿದೆ. ಭಾರತ ತನ್ನ ಸ್ವಂತ ಬಲದಲ್ಲಿ ವಿಶ್ವಕಪ್‌ ಕೂಟವೊಂದರ ಆತಿಥ್ಯ ವಹಿಸಲಿರುವುದು ಇದೇ ಮೊದಲಾಗಿದೆ. ಈ ಹಿಂದೆ ಮೂರು ಬಾರಿ ಭಾರತವು ನೆರೆ ರಾಷ್ಟ್ರಗಳ ಜೊತೆಗೂಡಿ ವಿಶ್ವಕಪ್‌ ಆಯೋಜಿಸಿತ್ತು.
ಲಂಡನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಸಭೆಯಲ್ಲಿ ವಿಶ್ವಕಪ್‌ ಆತಿಥ್ಯ ರಾಷ್ಟ್ರ ಯಾವುದೆಂದು ನಿರ್ಧರಿಸಲಾಯಿತು. ಭಾರತವು 1987ರಲ್ಲಿ ಪಾಕಿಸ್ತಾನ ಜೊತೆ, 1996ರಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ಹಾಗು 2011ರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜತೆಗೂಡಿ ವಿಶ್ವಕಪ್‌ ಕೂಟವನ್ನು ಆಯೋಜಿಸಿತ್ತು.
1987ರ ವಿಶ್ವಕಪ್‌ ಮೊದಲ ಬಾರಿ ಇಂಗ್ಲೆಂಡಿನ ಹೊರಗಡೆ ನಡೆದಿತ್ತು. ಈ ಕೂಟವನ್ನು ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸಿದ್ದವು. ಪಾಕ್ 2011ರ ವಿಶ್ವಕಪ್‌ನ ಸಹ ಆತಿಥ್ಯವನ್ನು ಆರಂಭದಲ್ಲಿ ವಹಿಸಿತ್ತು. ಆದರೆ, ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವನ್ನು ಕೈಬಿಡಲಾಗಿತ್ತು. 2011ರ ವಿಶ್ವಕಪ್‌ ಫೈನಲ್‌ ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. 2023ರ ಐಸಿಸಿ ವಿಶ್ವಕಪ್‌ ಕೂಟವು ಭಾರತದಲ್ಲಿ ಫೆ. 9ರಿಂದ ಮಾ. 26ರ ವರೆಗೆ ನಡೆಯಲಿದೆ. ಈ ಕೂಟದಲ್ಲಿ ಅಗ್ರ 10 ತಂಡಗಳು ಭಾಗವಹಿಸಲಿವೆ. ಅಗ್ರ ಏಳು ತಂಡಗಳ ಸಹಿತ ಭಾರತ ನೇರವಾಗಿ ಅರ್ಹತೆ ಗಳಿಸಲಿದೆ. 
ಕ್ರಿಕೆಟ್‌ ವಿಶ್ವಕಪ್‌ ಕೂಟದ ಆತಿಥ್ಯವನ್ನು ಇಂಗ್ಲೆಂಡ್‌ ಗರಿಷ್ಠ ಐದು ಬಾರಿ ವಹಿಸಿದೆ. 1975, 1979 ಮತ್ತು 1983ರಲ್ಲಿ ತಾನಾಗಿಯೇ ಆತಿಥ್ಯ ವಹಿಸಿದ್ದರೆ 1999 ಮತ್ತು 2019ರಲ್ಲಿ ಐಯರ್ ಲ್ಯಾಂಡ್‌, ನೆದರ್ಲೆಂಡ್‌, ಸ್ಕಾಟ್ಲೆಂಡ್‌ ಮತ್ತು ವೇಲ್ಸ್‌ ಜೊತೆಗೂಡಿ ಆತಿಥ್ಯ ವಹಿಸಿತ್ತು.
 




 
Top