ट्रेंडिंग

Blog single photo

ತಾನು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ - ಸಂಸದೆ ಸುಮಲತಾ ಅಂಬರೀಷ್

09/10/2019


ಮಂಡ್ಯ, ಅ.09 (ಹಿ.ಸ) -  ತಾವು ಯಾವುದೇ ಪಕ್ಷ ಸೇರುವ ಬಗ್ಗೆ ಯೋಚಿಸಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನನ್ನನ್ನು ಬೆಂಬಲಿಸಲಿಲ್ಲ. ಆ ಪಕ್ಷದ ಕಾರ್ಯಕರ್ತರು ಮಾತ್ರ ನನಗೆ ಶಕ್ತಿಯಾಗಿ ನಿಂತರು. ಬಿಜೆಪಿ ನನಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿತು.
ಹೀಗಾಗಿ, ನಾನು ಬಿಜೆಪಿ ಕಚೇರಿಗೆ ಬಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್‌ ಪಕ್ಷದ ಕಚೇರಿಗೆ ಹೋಗುವುದಿಲ್ಲ. ಆದರೆ, ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಈಗಲೂ ನಾನು ಪಕ್ಷೇತರ ಸಂಸದೆ. ಈವರೆಗೂ ಯಾವ ಪಕ್ಷದವರೂ ನನ್ನನ್ನು ಆಹ್ವಾನಿಸಿಲ್ಲ. ಈ ಪಕ್ಷವನ್ನೇ ಸೇರಬೇಕು ಎಂಬ ಬಗ್ಗೆ ನಾನೂ ಯಾವುದೇ ನಿರ್ಧಾರ ಮಾಡಿಲ್ಲ. ನಾನು ಎಲ್ಲಾ ಪಕ್ಷದ ಕಾರ್ಯಕರ್ತರ ಒತ್ತಾಸೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇನೆ. ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ರೈತರು ಹಾಗು ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಈಗಾಗಲೇ ಸಂಸತ್ತು ಹಾಗು ಪ್ರಧಾನಿ ಅವರ ಗಮನ ಸೆಳೆದಿದ್ದು, ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಪ್ರಧಾನಿ ಮೋದಿ ಅವರಿಂದ ಸಿಕ್ಕಿದೆ ಎಂದು ಹೇಳಿದರು.


 
Top