व्यापार

Blog single photo

ಆರ್ಥಿಕ ಸಂಕಷ್ಟದಲ್ಲಿ ಜೆಟ್ ಏರ್ ವೇಸ್, ಉದ್ಯೋಗಿಗಳಿಗೆ ಬದಲಿ ಉದ್ಯೋಗ - ವಿಮಾನ ಯಾನ ಸಚಿವಾಲಯ

17/07/2019


ನವದೆಹಲಿ, ಜು.17 (ಹಿ.ಸ) -  ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ,  ವಾಯು ಸಂಚಾರವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ಬದಲಿ ಉದ್ಯೋಗ ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ವೆಬ್ ಸೈಟ್ ಒಂದನ್ನು ರಚಿಸಿದೆ.
ಸ್ಪೈಸ್ ಜೆಟ್ ಮತ್ತು ಇಂಡಿಗೋ ಸೇರಿದಂತೆ ಇತರೇ ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಚಿವಾಲಯವು ಸಂಪರ್ಕದಲ್ಲಿದೆ. ಆ ಸಂಸ್ಥೆಗಳಲ್ಲಿ ಉದ್ಯೋಗ ಕಳೆದು ಕೊಂಡಿರುವ ಜೆಟ್ ಏರ್ ವೇಸ್ ಸಿಬ್ಬಂದಿಗಳ ನೇಮಕಕ್ಕೆ ಪ್ರಯತ್ನಿಸುವುದಾಗಿ ಸಚಿವಾಲಯ ಭರವಸೆ ನೀಡಿದೆ.
ಬಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2019ರ ಮೇಲೆ ಮಾತನಾಡುವ ವೇಳೆಯಲ್ಲಿ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ವಿಷಯವನ್ನು ತಿಳಿಸಿದ್ದಾರೆ.
ಉದ್ಯೋಗ ಕಳೆದು ಕೊಂಡಿರುವ ಜೆಟ್ ಏರ್ ವೇಸ್ ಸಿಬ್ಬಂದಿಗಳ ಪಟ್ಟಿಯೊಂದನ್ನು ತಯಾರಿಸಿ ಅದನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವುದಾಗಿ ಈ ಮೂಲಕ ಅವರಿಗೆ ಅವರವರ ಅರ್ಹತೆಗೆ ಅನುಗುಣವಾಗಿ ಬೇರೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಸಚಿವ ಪುರಿ ಅವರು ಹೆಳಿದ್ದಾರೆ.
ಆದರೆ ಜೆಟ್ ಏರ್ ವೇಸ್ ಅನುಭವಿಸಿರುವ ವ್ಯಾವಹಾರಿಕ ನಷ್ಟಕ್ಕೆ ಸರಕಾರ ಉತ್ತರದಾಯಿಯಾಗಿರುವುದಿಲ್ಲ ಎಂದೂ ಸಚಿವರು ಇದೇ ವೇಳೆ ಮೇಲ್ಮನೆಗೆ ತಿಳಿಸಿದರು.


 
Top