मनोरंजन

Blog single photo

ದಬಾಂಗ್ - 3 ಹಿಂದಿ ಚಿತ್ರದಲ್ಲಿ ಖಳನಟ ಬಲ್ಲಿಸಿಂಗ್ ಆಗಿ ನಟ ಸುದೀಪ್

09/10/2019


ಮುಂಬೈ, ಅ.09 (ಹಿ.ಸ) -  ಬಾಲಿವುಡ್ ನಟ ಸಲ್ಮಾನ್‌ ಖಾನ್‌ ನಟನೆಯ “ದಬಾಂಗ್‌-3′ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಸುದೀಪ್‌ ವಿಲನ್‌ ಪಾತ್ರದಲ್ಲಿದ್ದು, ಅವರ ಗೆಟಪ್‌, ಲುಕ್‌ ಹೇಗಿರುತ್ತದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿತ್ತು. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ.  ಕುತೂಹಲಕ್ಕೆ ಉತ್ತರ ನೀಡಿರೋದು ಬೇರೆ ಯಾರು ಅಲ್ಲ, “ದಬಾಂಗ್‌-3′ ಚಿತ್ರದ ಹೀರೋ ಸಲ್ಮಾನ್‌ ಖಾನ್‌.  ಚಿತ್ರದಲ್ಲಿ ಸುದೀಪ್‌ ಪಾತ್ರ ಪರಿಚಯವನ್ನು ಸ್ವತಃ ಸಲ್ಮಾನ್‌ ಖಾನ್‌ ಮಾಡಿದ್ದು,  ಸುದೀಪ್‌ ಚಿತ್ರದಲ್ಲಿ ಬಲ್ಲಿ ಸಿಂಗ್‌ ಎಂಬ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ವಿಲನ್‌ ಎಷ್ಟೇ ಬಲಶಾಲಿಯಾಗಿದ್ದರೂ ಆತನನ್ನು ಆಟವಾಡಿಸೋದರಲ್ಲಿ ಇರೋ ಮಜಾನೇ ಬೇರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸುದೀಪ್‌ ಕೂಡ, ಟ್ವೀಟರ್‌ ಮೂಲಕ ಪ್ರತಿಕ್ರಿಯಿಸಿ, “ದಬಾಂಗ್‌-3′ ಚಿತ್ರದಲ್ಲಿ ನಟಿಸಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ವಿಲನ್‌ಗೆ ಹೀರೋ ಮೇಲೆ ಪ್ರೀತಿಯಾಗಿದೆ’ ಎನ್ನುತ್ತಾ ಸಲ್ಮಾನ್‌ ಖಾನ್‌ ಜೊತೆ ನಟಿಸಿದ ಅನುಭವವನ್ನು ಬರೆದುಕೊಂಡಿದ್ದಾರೆ.  ದಬಾಂಗ್‌-3 ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು, ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಹಿಂದೆ ಸುದೀಪ್‌, ಸಲ್ಮಾನ್‌ ಚಿತ್ರದಲ್ಲಿ ನಟಿಸುತ್ತಾರೆಂದು ಸುದ್ದಿಯಾಗಿತ್ತಾದರೂ ಅದು ಆಗಿರಲಿಲ್ಲ. ಇದೀಗ “ದಬಾಂಗ್‌-3′ ಚಿತ್ರದ ಮೂಲಕ ಸಾಧ್ಯವಾಗಿದೆ. ಈ ಚಿತ್ರ ಡಿಸೆಂಬರ್‌ 20ರಂದು ತೆರೆಕಾಣುತ್ತಿದೆ. 


 
Top