राज्य

Blog single photo

ಜಯ ಕರ್ನಾಟಕ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

17/05/2021

ಕೋಲಾರ,ಮೇ 17(ಹಿ.ಸ): ಕೋಲಾರ ಜಿಲ್ಲೆಯಲ್ಲಿ ಕರೋನಾ ಎರಡನೇ ಅಲೆಯ ರೌದ್ರತೆಯ ಪರಿಣಾಮವಾಗಿ ಪ್ರತಿದಿನ ಏರುತ್ತಿರುವ ಸೋಂಕಿನ ಮತ್ತು ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾ ಜಯಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್, ಮೊದಲನೇ ಕರೋನ-19 ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಐ ಸಿ ಎಂ ಆರ್ ನಿಗದಿಪಡಿಸಿದ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಕೋಲಾರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ ಪರಿಣಾಮವಾಗಿ ಹೆಚ್ಚಿನ ತೊಂದರೆ ಆಗಿರುವುದಿಲ್ಲ. ಆದರೆ ಈಗಿನ ಎರಡನೇ ಅಲೆ ಸಂದರ್ಭದಲ್ಲಿ ಬಹುತೇಕ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿದ ಪರಿಣಾಮವಾಗಿ ಪ್ರತಿದಿನ ಹೆಚ್ಚಿನ ಸೋಂಕಿತರು ಮತ್ತು ಸಾವು ನೋವುಗಳು ಕಂಡುಬರುತ್ತಿದೆ. ಆದ್ದರಿಂದ ಜನರ ಹಿತದೃಷ್ಟಿಯಿಂದ ಆಶಾಕರ್ತೆಯರ ಮೂಲಕ ಮನೆ ಮನೆಯ ಆರೋಗ್ಯ ತಪಾಸಣೆಯನ್ನು ಮಾಡಿಸಿ ಸೋಂಕಿತರನ್ನು ಪತ್ತೆಹಚ್ಚಿ  ನಂತರ ಇವರನ್ನು ತಪಾಸಣೆಗೊಳಪಡಿಸಿ ಮುಂದೆ ಚಿಕಿತ್ಸೆಯನ್ನು ನೀಡುವ ಕೆಲಸವನ್ನು ಪ್ರಾರಂಭಿಸಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್‍ಗಳನ್ನಾಗಿ ಪರಿವರ್ತಿಸಿ ಇದರಲ್ಲಿ ಎ ಸಿಂಮಟಂಮ್ಯಾಟಿಕ್, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಇಲ್ಲಿಗೆ ಕರೆತಂದು ಚಿಕಿತ್ಸೆಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯವಿರುವ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇಲ್ಲದಿರುವಂತಹ ಮನೆಗಳಲ್ಲಿ ಎ ಸಿಂಮ್ಟಮ್ಯಾಟಿಕ್ ಸೋಂಕಿತರು ಹೋಂಕ್ವಾರನ್‍ಟೈನ್ ಆಗಿ ಮನೆಯಲ್ಲೇ ಚಿಕಿತ್ಸೆಯನ್ನು ಪಡೆಯುವುದಕ್ಕೆ ಅವಕಾಶವನ್ನು ನೀಡಬಾರದು. ಹೋಂ ಐಸೋಲೇಷನ್ ಆಗಿರುವಂತಹ ಸೋಂಕಿತರಿಗೆ ಮೆಡಿಕಲ್ ಮತ್ತು ಮೆಡಿಸನ್ ಕಿಟ್ಟನ್ನು ಮನೆಗೆ ಒದಗಿಸಬೇಕು. ಇವರ ಆರೋಗ್ಯದ ಬಗ್ಗೆ ಆಗಿಂದಾಗ್ಗೆ ಆರೋಗ್ಯ ಕಾರ್ಯಕರ್ತರ ಮೂಲಕ ಭೇಟಿಕೊಟ್ಟು ಮಾಹಿತಿಯನ್ನು ಕಲೆಹಾಕಿ ಅಗತ್ಯ ಸೂಚನೆಗಳನ್ನು ಇವರ ಮೂಲಕವೇ ಸೋಂಕಿತರಿಗೆ ನೀಡುವಂತಹ ಕೆಲಸವಾಗಬೇಕೆಂದರು.

ಕೋಲಾರ ಜಿಲ್ಲೆಯ ಎಲ್ಲಾ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕವನ್ನು ಸ್ಥಾಪಿಸಬೇಕು. ಸರ್ಕಾರಿ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಮತ್ತು ಆಮ್ಲಜನಕವನ್ನು ಹೆಚ್ಚು ಮಾಡಬೇಕು. ಸೋಂಕಿತ ಒಳ ರೋಗಿಗಳಿಗೆ ಉತ್ತಮ ಪೌಷ್ಟಿಕಾಂಶದ ಆಹಾರ ಮತ್ತು ಬಿಸಿನೀರಿನ ವ್ಯವಸ್ಥೆಯಾಗಬೇಕು. ಕೋರೋನ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಸರ್ಕಾರಿ ಆಸ್ಪತ್ರೆಗಳ ವಾರ್ಡುಗಳಲ್ಲಿ ಸಿಸಿಟಿವಿಯನ್ನು ಅಳವಡಿಸಿ ಇವರುಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂಬ ಬಗ್ಗೆ ನಿಗಾವಹಿಸಿ ಪಾರದರ್ಶಕತೆಯನ್ನು ಪ್ರದರ್ಶಿಸುವ ಮೂಲಕ ಸೋಂಕಿತರಲ್ಲಿ ಮತ್ತು ಸೋಂಕಿತರ ಸಂಬಂಧಿಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವಾಗಬೇಕು. ರೋಗಿಗಳಿಗೆ ಅವಶ್ಯಕತೆ ಇರುವ ರೆಮಿಡಿಸಿವಿರ್ ಇಂಜೆಕ್ಷನ್ ಸೇರಿದಂತೆ ಅಗತ್ಯ ಔಷಧಿಗಳ ದಾಸ್ತಾನನ್ನು ಹೆಚ್ಚುಗೊಳಿಸಬೇಕು. ಕೋವಿಡ್ ವ್ಯಾಕ್ಸಿನೇಷನ್ ಮಾಡುವ ಆರೋಗ್ಯ ಕೇಂದ್ರಗಳಲ್ಲಿ 30 ನಿಮಿಷಗಳ ಕಾಲ ವ್ಯಾಕ್ಸಿನ್ ಪಡೆದವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕೆಲವು ಕಡೆ ಇಲ್ಲದಿರುವ ಕಾರಣ ಇಂತಹ ಕಡೆಗಳಲ್ಲಿ ಹಾಸನದ ವ್ಯವಸ್ಥೆಗಳನ್ನು ಮಾಡಬೇಕು. ಚಿಕಿತ್ಸಾ ಕೇಂದ್ರಗಳಲ್ಲಿ ಸಮರ್ಪಕವಾದ ಚಿಕಿತ್ಸೆ ನಡೆಯುತ್ತಿದೆಯೇ ಅಥವಾ ಇಲ್ಲವೇ ಎಂಬುವುದನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಾದ ಶಾಸಕರು ಸಂಸದರು ಎಂಎಲ್ಸಿಗಳು ರಾತ್ರಿ ವೇಳೆಯಲ್ಲಿ ಮತ್ತು ಬೆಳಗಿನ ವೇಳೆಯಲ್ಲಿ ಇಂತಹ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿಯನ್ನು ನೀಡಿ ಪರಿಶೀಲಿಸುವ ಮೂಲಕ ಕಂಡುಕೊಳ್ಳಬೇಕೆಂದು ಒತ್ತಾಯಿಸಿದರು. 

ರೆಮಿಡಿಸ್‍ವಿರ್ ಇಂಜೆಕ್ಷನ್ನಿನ ಕಾಳದಂಧೆಯಲ್ಲಿ ತೊಡಗಿರುವಂತಹ ಕೆಲವು ಸರ್ಕಾರಿ ಸಿಬ್ಬಂದಿ ಹಾಗೂ ಹೊರಗಿನ ದಂಧೆಕೋರರ ವಿರುದ್ಧ ಜಿಲ್ಲಾಡಳಿತ ಮತ್ತು ಪೆÇಲೀಸ್ ಇಲಾಖೆಯವರು ದಾರಿಗಳನ್ನು ನಡೆಸಿ ಇಂತಹ ಕೃತ್ಯಗಳಿಗೆ ಕಡಿವಾಣವನ್ನು ಹಾಕಬೇಕು. ಸ್ಥಳೀಯ ಶಾಸಕರು ಮತ್ತು ಸಂಸದರು ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯ ಹಣವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ನಿರ್ವಹಣೆಗೆ ವಿನಿಯೋಗಿಸಿ ಅಗತ್ಯ ಸೇವೆಗಳನ್ನು ಕಲ್ಪಿಸಿಕೊಡುವ ಪ್ರಯತ್ನಗಳಾಗಬೇಕು. ಈ ಕ್ರಮಗಳನ್ನು ಜಿಲ್ಲಾಡಳಿತದ ಮೂಲಕ ಅನುಷ್ಠಾನಕ್ಕೆ ತರುವ ಮೂಲಕ ಜಿಲ್ಲೆಯಲ್ಲಿ ಆಗುತ್ತಿರುವ ಪ್ರಾಣ ಹಾನಿ ಮತ್ತು ಸೋಂಕು ಹರಡುವಿಕೆ ತಡೆಗೆ ಮುಂದಾಗುವಂತೆ ಜಿಲ್ಲೆಯ ಜನತೆಯ ಪರವಾಗಿ ಜಯಕರ್ನಾಟಕ ಸಂಘಟನೆಯ ಒತ್ತಾಯಿಸಿರುವುದಾಗಿ ತಿಳಿಸಿರುತ್ತಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಸೋಂಕಿತರಿಗೆ ಉತ್ತಮ ಆಹಾರವನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ರೆಮಿಡಿಸ್‍ವಿರ್ ಕಳ್ಳ ಸಾಗಾಣಿಕೆ ದಂಧೆಕೋರರ ವಿರುದ್ಧ ಈಗಾಗಲೇ ದಾಳಿ ನಡೆಸಿ ವಿಚಾರಣೆಗೆ ಗುರಿಪಡಿಸಲಾಗಿದೆ. ಜಿಲ್ಲಾಡಳಿತದ ಕಡೆಯಿಂದ ತೆಗೆದುಕೊಳ್ಳಬೇಕಾದ ಅಂತಹ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸೋಂಕಿತರಿಗೆ ಉತ್ತಮ ಚಿಕಿತ್ಸೆಯನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದೆಂದು ಭರವಸೆ ನೀಡಿದ ಅವರು, ಇದರ ಜೊತೆಗೆ ರೆಮಿಡಿಸ್‍ವಿರ್ ಇಂಜೆಕ್ಷನ್ ಕಾಳ ದಂಧೆಯಲ್ಲಿ ತೊಡಗಿರುವ ಅಂತಹವರ ವಿರುದ್ಧ ಖಚಿತ ಮಾಹಿತಿ ನೀಡಿದ್ದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಜಿಲ್ಲಾ ಸಲಹೆಗಾರರಾದ ರಾಜಣ್ಣ ಮು.ರಾಘವೇಂದ್ರ, ಜಿಲ್ಲಾ ಸಂಚಾಲಕರಾದ ಕೆ.ಎನ್ ಪ್ರಕಾಶ್, ಕೊಂಡರಾಜನಹಳ್ಳಿ ವಿ. ಜಗದೀಶ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಂ ಗೋವಿಂದರಾಜ್ ಉಪಸ್ಥಿತರಿದ್ದರು.


 
Top