क्षेत्रीय

Blog single photo

ಕಾಂಗ್ರೆಸ್ಸಿಗೆ ವಿಷಯಾಧಾರಿತ ಬೆಂಬಲ ಇಲ್ಲ - ಎಚ್. ಡಿ. ಕುಮಾರಸ್ವಾಮಿ

09/10/2019


ಬೆಂಗಳೂರು, ಅ.09 (ಹಿ.ಸ) -  ನಾಳೆಯಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ವಿಷಯಾಧಾರಿತ ಬೆಂಬಲ ನೀಡುವ ಅಗತ್ಯವಿಲ್ಲ. ನಮ್ಮ ಪಕ್ಷದಿಂದಲೇ ಜನಪರ ಹೋರಾಟ ನಡೆಯಲಿದೆ ಎಂದು ಜೆಡಿಎಸ್ ಶಾಸಕಾಂಗ‌ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.  ಜೆ.ಪಿ.ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮಸ್ಯೆಗಳಿಗೆ ಪಕ್ಷದಿಂದ ಹೋರಾಟ ಮಾಡಲಾಗುವುದು‌. ಜನಪರ ಸಮಸ್ಯೆಗಳಿಗೆ ಜಂಟಿಯಾಗಿ ಹೋರಾಟ ಮಾಡುವ ಅಗತ್ಯವಿಲ್ಲ. ಏಕಾಂಗಿಯಾಗಿ ತಮ್ಮ ಪಕ್ಷ ಹೋರಾಟ ನಡೆಯಲಿದೆ ಎಂದು ಹೇಳಿದರು.  ಕಾಂಗ್ರೆಸ್ ನ ಸಿದ್ದರಾಮಯ್ಯ ಅವರಿಗೆ ನಮಗಿಂತಲೂ ಹೆಚ್ಚಿನ ಶಕ್ತಿ ಹೊಂದಿದ್ದು, ಅವರ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರಿದ್ದಾರೆ. ಜೆಡಿಎಸ್ ಬೆಂಬಲ ಅವರಿಗೆ ಅಗತ್ಯವಿಲ್ಲ ಎಂದು ಭಾವಿಸಿದ್ದೇವೆ. ನಮ್ಮ ಶಕ್ತಿಯ ಮೇಲೆ ಅವರು ಅವಲಂಬಿತರಾಗಿಲ್ಲ. ನಾವು ನಮ್ಮ ಕೆಲಸ ನಾವು ಮಾಡುತ್ತೇವೆ. ಅವರು ಅವರ ಕೆಲಸ ಮಾಡುತ್ತಾರೆ ಎಂದು ಹೇಳಿದರು. ನೆರೆ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟ ಮಾಡುವ ಮಾಡುವ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.  ಪಕ್ಷ ಸಂಘಟನೆ ಹಾಗು ಜೆಡಿಎಸ್ ಸರ್ಕಾರದಲ್ಲಿ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನಮುಟ್ಟಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಕುಂಠಿತಗೊಂಡಿರುವ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುವುದು. ನವೆಂಬರ್ 1 ರಿಂದ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸಕ್ಕೆ ಚಿಂತನೆ ನಡೆಸಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುವ ರೀತಿಯಲ್ಲಿ ಬಿಜೆಪಿಯಲ್ಲಿ ವಾಸ್ತವ ಇರುವುದೇ ಆದರೆ, ಯಡಿಯೂರಪ್ಪ ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತ. ಮೈತ್ರಿ ಸರ್ಕಾರ ಇದ್ದಾಗ ಅಷ್ಟೋ ಇಷ್ಟೋ ಕೆಲಸ ಮಾಡಿದ್ದೇವೆ. ಆದರೆ, ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಏನೇನು ಕೆಲಸ ಆಗುತ್ತಿಲ್ಲ‌ ಎಂಬುದು ಯತ್ನಾಳ್ ಹೇಳಿಕೆಯಿಂದ ತಿಳಿಯುತ್ತಿದೆ. ಅವರ ಹೇಳಿಕೆಯ ವಾಸ್ತವ ನೋಡಿದರೆ ಹೊಸದಾಗಿ ಚುನಾವಣೆಗೆ ಹೋಗುವುದು ಒಳ್ಳೆಯದು. ಯತ್ನಾಳ್ ಹೇಳಿಕೆ ಸತ್ಯವಾಗಿದ್ದಲ್ಲಿ ಯಡಿಯೂರಪ್ಪ ಈ‌ ರೀತಿ ಸರ್ಕಾರ ನಡೆಸುವ ಬದಲು ಮಧ್ಯಂತರ ಚುನಾವಣೆಗೆ ಹೋಗಿ ಹೊಸದಾಗಿ ಮತ್ತೆ ಗೆದ್ದು ಬಂದು ಸರ್ಕಾರ ರಚಿಸಲಿ ಎಂದು ಕುಮಾರಸ್ವಾಮಿ‌ ಸವಾಲು ಹಾಕಿದರು.
ಬಿಜೆಪಿ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದು ಅವರ ವ್ಯಯಕ್ತಿಕ ಅಭಿಪ್ರಾಯ. ಅವರ ನಿರ್ಧಾರದ ಬಗ್ಗೆ ತಾವು ಮಾತನಾಡಿಕೊಳ್ಳುತ್ತಾರೆ ಎಂದರು. ಕೆಲವು ಬಾರಿ ಜೆಡಿಎಸ್ ಖಾಲಿಯಾಗುತ್ತದೆ .ಮತ್ತೆ ಹಲವು ಬಾರಿ ತಾನೇ ತಾನಾಗಿ ತುಂಬುತ್ತದೆ. ಮಗದೊಮ್ಮೆ ಅತಿ ಹೆಚ್ಚಾಗಿರುತ್ತದೆ. ಇದುವೇ ಕಾಲಚಕ್ರ ಎಂದು ಪರೋಕ್ಷವಾಗಿ ಮಾಜಿ ಶಾಸಕ ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದರು.
ನೈಸರ್ಗಿಕ ವಿಕೋಪಕ್ಕಾಗಿ ಕಾಯ್ದಿರಿಸಿದ್ದ ಹಣದಲ್ಲಿ ಕೆಲ ಪಾಲನ್ನು ಮಾತ್ರ ಕೆಲವೊಮ್ಮೆ ಮಾತ್ರ ರಾಜ್ಯಗಳಿಗೆ ಕೊಡುತ್ತಾರೆ. ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರ, ರಾಜಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಆದರೆ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ನೀಡಲಾಗಿದೆ. 
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ನಾಳೆಯಿಂದ ಅಧಿವೇಶನ ನಡೆಯಲಿದ್ದು, ಉಭಯ ಸದನಗಳಲ್ಲಿ ಪಕ್ಷದ ಶಾಸಕರು ಹೋರಾಟ ನಡೆಸುತ್ತಾರೆ. ನಗರದ ಮೌರ್ಯ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಸರ್ಕಾರದ ನೆರೆ ವೈಫಲ್ಯತೆ ಖಂಡಿಸಿ ಪಾದಯಾತ್ರೆ ಮಾಡಲಾಗುವುದು. ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಾಳಿನ ಸದನದ ಕಾರ್ಯಕಲಾಪ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.


 
Top