राष्ट्रीय

Blog single photo

ಬೈಕ್ ಸವಾರನ ಮೇಲೆ ಲಾಠಿ ಎಸೆದ ಸಂಚಾರಿ ಪೊಲೀಸ್ - ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ

29/11/2019


ತಿರುವನಂತಪುರಂ, ನ.29 (ಹಿ.ಸ) -  ರಸ್ತೆಯಲ್ಲಿ ಹೋಗುವ ವಾಹನ ಸವಾರರನ್ನು ನಿಲ್ಲಿಸಿ ಸಂಚಾರಿ ಪೊಲೀಸರು ತಪಾಸಣೆ ನಡೆಸುವುದು ಮಾಮೂಲು. ಈ ವೇಳೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿ ತಮ್ಮ ಕೈಯಲ್ಲಿರುವ ಲಾಠಿಯನ್ನು ಸಾಂಕೇತಿಕವಾಗಿ ವಾಹನಗಳಿಗೆ ಅಡ್ಡ ಹಿಡಿದು ಅವುಗಳನ್ನು ನಿಲ್ಲಿಸುವುದು ವಾಡಿಕೆ. 
ಆದರೆ, ಕೇರಳದಲ್ಲಿ ತಪಾಸಣೆಗಾಗಿ ಬೈಕ್ ನಿಲ್ಲಿಸಲಿಲ್ಲವೆಂದು ಕೋಪಗೊಂಡ ಪೊಲೀಸ್ ಸಿಬ್ಬಂದಿ ತನ್ನ ಕೈಯಲ್ಲಿದ್ದ ಲಾಠಿಯನ್ನೇ ಬೈಕ್ ಚಲಾಯಿಸುತ್ತಿದ್ದ ಯುವಕನ ಮೆಲೆ ಎಸೆದಿದ್ದರಿಂದ  ಯುವಕನ ಬೈಕ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದ್ದರಿಂದ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೊಲ್ಲಂನಲ್ಲಿ ಚಂದ್ರಮೋಹನ್ ಎಂಬ ಸಿವಿಲ್ ಪೊಲೀಸ್ ಸಿಬ್ಬಂದಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬರುತ್ತಿದ್ದ 22 ವರ್ಷದ ಸಿದ್ದಿಕ್ ಎಂಬ ಯುವಕನ ಬೈಕನ್ನು ನಿಲ್ಲಿಸುವಂತೆ ಚಂದ್ರಮೋಹನ್ ಸೂಚಿಸಿದ್ದಾರೆ. ಆದರೆ, ಸಿದ್ದಿಕ್ ಪೊಲೀಸ್ ಸೂಚನೆಯನ್ನು ಗಮನಿಸದೇ ಮುಂದೆ ಸಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ಪೊಲೀಸ್ ಸಿಬ್ಬಂದಿ ತನ್ನ ಕೈಯಲ್ಲಿದ್ದ ಲಾಠಿಯನ್ನು ಸಿದ್ದಿಕ್ ಬೈಕಿನತ್ತ ಎಸೆದಿದ್ದಾರೆ. ಈ ಗೊಂದಲದಲ್ಲಿ ಸಿದ್ದಿಕ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದೆ. ಘಟನೆಯಲ್ಲಿ ಸಿದ್ದಿಕ್ ಅವರ ತಲೆಭಾಗಕ್ಕೆ ತೀವ್ರ ಪೆಟ್ಟಾಗಿದೆ.  ಮಾತ್ರವಲ್ಲದೇ ಬಲ ಕಾಲಿಗೂ ಏಟುಬಿದ್ದಿದೆ. ಘಟನೆ ನಡೆದ ಬಳಿಕ ಪೊಲೀಸರು ಆ ಯುವಕನನ್ನು ಸಮೀಪದಲ್ಲಿದ್ದ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಹೋಗಿದ್ದಾರೆ.  ಘಟನೆ ಬಗ್ಗೆ ಮನೆಯವರಿಗೆ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಯುವಕನ ತಂದೆ ಪೊಲೀಸರ ನಿರ್ಲಕ್ಷ್ಯತನವನ್ನು ಆರೋಪಿಸಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಕೇರಳ ಡಿಜಿಪಿ ಲೋಕನಾಥ್ ಬೆಹ್ರಾ, ಈ ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೊಲ್ಲಂ ಎಸ್.ಪಿ.ಯವರಿಗೆ ಸೂಚಿಸಿದ್ದಾರೆ. ಘಟನೆ ಕುರಿತಾದಂತೆ ಡಿ.ಎಸ್.ಪಿ. ಶ್ರೇಣಿಯ ಇಬ್ಬರು ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಎಂದು  ಬೆಹ್ರಾ ತಿಳಿಸಿದ್ದಾರೆ. ವಾಹನ ನಿಬಿಡ ರಸ್ತೆಗಳಲ್ಲಿ ಪೊಲೀಸರು ತಪಾಸಣೆಗಾಗಿ ವಾಹನಗಳನ್ನು ನಿಲ್ಲಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ಪೊಲೀಸ್ ಇಲಾಖೆ ಮತ್ತು ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.


 
Top