व्यापार

Blog single photo

ಆದಾಯ ತೆರಿಗೆ ಪಾವತಿ ವಿಧಾನ ಕಠಿಣ ಎಂಬುದು ಸುಳ್ಳು ಸುದ್ದಿ - ಸಿಬಿಡಿಟಿ

17/07/2019



ನವದೆಹಲಿ, ಜು.17 (ಹಿ.ಸ) - ಆದಾಯ ತೆರಿಗೆ ಪಾವತಿ ವಿಧಾನ ತುಂಬಾ ಕಠಿಣಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ, ಕೇವಲ ವದಂತಿ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಇಂದು ಸ್ಪಷ್ಟನೆ ನೀಡಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ. 
2019ರ ಏಪ್ರಿಲ್ 1 ರಂದು ಪ್ರಕಟಣೆ ಹೊರಡಿಸಿದ ಬಳಿಕ, ಐಟಿಆರ್ 2, ಐಟಿಆರ್ 3 ಸೇರಿದಂತೆ ಯಾವುದೇ ರೀತಿಯ ಆದಾಯ ತೆರಿಗೆ ಪಾವತಿಯ (ಐಟಿಆರ್) ನಮೂನೆಯಲ್ಲಿ ಯಾವ ಬದಲಾವಣೆವಾಗಿಲ್ಲವೆಂದು ಸಿಬಿಡಿಟಿ ಹೇಳಿದೆ.
ತೆರಿಗೆ ಪಾವತಿದಾರರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಯುಟಿಲಿಟಿಯನ್ನು ಮಾತ್ರ ಮೇಲ್ದರ್ಜೆಗೇರಿಸಲಾಗಿದೆ. ಆದರೆ, 2019ರ ಜುಲೈ 11ರಿಂದ ಐಟಿಆರ್ 2, ಐಟಿಆರ್ 3 ಪಾವತಿ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹುಸಿ ವದಂತಿ ಹರಡಿತ್ತು. 
ಎಲ್ಲಾ ರೀತಿಯ ಐಟಿಆರ್ ಇ ಫೈಲಿಂಗ್ ಮಾಡಲು ಅನುಕೂಲವಾಗುವಂತೆ ಯುಟಿಲಿಟಿ ಸಾಫ್ಟ್ ವೇರ್ ಅನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದಾಗಿ ಇ - ಫೈಲಿಂಗ್ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ. ಅಷ್ಟೇ ಅಲ್ಲ, ಇ ಪಾವತಿಗೆ ಸಂಬಂಧಿಸಿದಂತೆ ನಿರಂತರವಾಗಿ ಗ್ರಾಹಕರು, ತೆರಿಗೆ ಪಾವತಿದಾರರಿಂದ ಫೀಡ್ ಬ್ಯಾಕ್ ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಬಿಡಿಟಿ ತಿಳಿಸಿದೆ.


 
Top