मनोरंजन

Blog single photo

ತಿವಿಕ್ರಮ ಚಿತ್ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್

18/07/2019


ಬೆಂಗಳೂರು, ಜು.18 (ಹಿ.ಸ) - ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅವರು ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.  ಈ ಚಿತ್ರವನ್ನು ಸಹನಾಮೂರ್ತಿ  ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಇದೀಗ ಶೀರ್ಷಿಕೆ ನೀಡಲಾಗಿದೆ. 
ಅಷ್ಟೇ ಅಲ್ಲ, ನಾಯಕಿ ಆಯ್ಕೆಯನ್ನು ಮಾಡಲಾಗಿದೆ. ಅಂದಹಾಗೆ, ರವಿಚಂದ್ರನ್‌ ಪುತ್ರ ವಿಕ್ರಮ್‌ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ತ್ರಿವಿಕ್ರಮ ಎಂದು ಹೆಸರಿಡಲಾಗಿದೆ.  ವಿಕ್ರಮ್‌ಗೆ ನಾಯಕಿಯಾಗಿ ಆಕಾಂಕ್ಷ ಎಂಬಾಕೆ ಆಯ್ಕೆಯಾಗಿದ್ದಾರೆ.  ಮುಂಬೈ ಮೂಲದ ಆಕಾಂಕ್ಷ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 
ಕಳೆದ ಹದಿನೈದು ದಿನಗಳ ಹಿಂದೆಯೇ ಮುಂಬೈನಿಂದ ಬೆಂಗಳೂರಿಗೆ ಬಂದು, ಇಲ್ಲಿ ಅಭಿನಯ ತರಂಗ ನಟನಾ ಶಾಲೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಚಿತ್ರದ ಪಾತ್ರಕ್ಕಾಗಿ ವಿಕ್ರಮ್‌ ಕೂಡ ಈಗಾಗಲೇ ಸಾಕಷ್ಟು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಹೇಳುವ ನಿರ್ದೇಶಕ ಸಹನಾಮೂರ್ತಿ, ವಿಕ್ರಮ್‌ ಅವರು ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದು, ನಟನೆ, ಜಿಮ್ನಾಸ್ಟಿಕ್‌, ಡ್ಯಾನ್ಸ್‌, ಫೈಟ್‌ ಇವೆಲ್ಲದರಲ್ಲೂ ಪಕ್ವವಾಗಿದ್ದಾರೆ. 
ನಾಯಕಿ ಆಕಾಂಕ್ಷ ಅವರು ಸಹ ಅಭಿನಯ ತರಂಗದಲ್ಲಿ ನಟನೆ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುತ್ತಿದ್ದು, ಕನ್ನಡ ಭಾಷೆಯನ್ನು ಕಲಿಯುತ್ತಿದ್ದಾರೆ. ಸ್ವತಃ ರವಿಚಂದ್ರನ್‌ ಅವರೇ ಆ ಚಿತ್ರದ ಕಥೆ ಕೇಳಿ, ವಿಕ್ರಮ್‌ಗೆ ಸರಿಹೊಂದುವ ಕಥೆ ಎಂದು ಗ್ರೀನ್‌ಸಿಗ್ನಲ್‌ ಕೊಟ್ಟ ಬಳಿಕ ಸಿನಿಮಾ ಚಟುವಟಿಕೆಗಳು ಸಾಗಿವೆ. 
 ನಾಯಕ ವಿಕ್ರಮ್‌ಗೆ ಇಲ್ಲಿ ಹೊಸ ಗೆಟಪ್‌ ಇರಲಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ.  ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್‌ ಇತರರು ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯಾ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಆಗಸ್ಟ್‌ 10ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಬೆಂಗಳೂರು, ದಾಂಡೇಲಿ, ರಾಜಸ್ಥಾನ್‌ ಹಾಗು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ.


 
Top