मनोरंजन

Blog single photo

ಡಾ.ರಾಜ್ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ

27/11/2019


ಬೆಂಗಳೂರು, ನ.27 (ಹಿ.ಸ) - ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ರಾಮ್‌ ಕುಮಾರ್‌, ಶ್ರೀಮುರಳಿ, ವಿಜಯ ರಾಘವೇಂದ್ರ, ವಿನಯ್‌ ರಾಜಕುಮಾರ್‌, ಧೀರನ್‌ ರಾಮಕುಮಾರ್‌, ಧನ್ಯಾ ರಾಮ್‌ಕುಮಾರ್‌ ಹೀಗೆ ವರನಟ ಡಾ. ರಾಜಕುಮಾರ್‌ ಕುಟುಂಬದ ಅನೇಕರು ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಧ್ರುವನ್‌ ಎಂಬ ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದೆ.  ಪಾರ್ವತಮ್ಮ ರಾಜಕುಮಾರ್‌ ಅವರ ತಮ್ಮನ ಮಗ ಧ್ರುವನ್‌ ಇದೀಗ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.  “ನೀನಾಸಂ’ನಲ್ಲಿ ಕೆಲ ಕಾಲ ಅಭಿನಯ ತರಬೇತಿ ಪಡೆದುಕೊಂಡಿರುವ ಧ್ರುವನ್‌, ಸುಮಾರು ಐದಾರು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವನ್ನೂ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಧ್ರುವನ್‌ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ, ಚಿತ್ರದ ಮೊದಲ ಸನ್ನಿವೇಶಕ್ಕೆ ಸೆಂಚುರಿ ಸ್ಟಾರ್‌ ಶಿವರಾಜಕುಮಾರ್‌ ಆರಂಭ ಫ‌ಲಕ ತೋರಿದರೆ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನೂ ಹೆಸರಿಡದ ಈ ಚಿತ್ರವನ್ನು ಬಿ.ಎಸ್‌.ಸುಧೀಂದ್ರ ನಿರ್ಮಿಸುತ್ತಿದ್ದಾರೆ. 2017ರಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ನೈಜ ಘಟನೆ ಈ ಚಿತ್ರದಲ್ಲಿ ತೆರೆಮೇಲೆ ಬರುತ್ತಿದ್ದು, ಚಿತ್ರದಲ್ಲಿ ಅನಾಥ ಹುಡುನಾಗಿ, ಪ್ರಕೃತಿ ಪ್ರೇಮಿಯ ಪಾತ್ರದಲ್ಲಿ ಧ್ರುವನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಧ್ರುವನ್‌ಗೆ ನಾಯಕಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್‌ ವಾರಿಯಾರ್‌ ಅಭಿನಯಿಸಲಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಘು ಕೋವಿ, “ಪ್ರೀತಿ ಎನ್ನುವುದು ಅಂತ್ಯಕ್ಕೆ ಹೋದಾಗ ಏನಾಗುತ್ತದೆ ಎಂಬುದು ಚಿತ್ರದ ಒಂದು ಎಳೆಯ ಸಾರಾಂಶವಾಗಿದೆ. ಇಂದಿನ ಜನರೇಶನ್‌ಗೆ ಹತ್ತಿರವಾಗುವಂತ ಕಥೆ ಚಿತ್ರದಲ್ಲಿದೆ ಎಂದು ವಿವರಣೆ ನೀಡಿದ್ದಾರೆ. 
ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಸತ್ಯಹೆಗಡೆ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ.


 
Top