राज्य

Blog single photo

ಎಸ್‍ಎಂಎಸ್ ಪಾಲನೆಗೆ ಪಂಚಾಯತಿ ಕಾರ್ಯಪಡೆ ಎಚ್ಚರ ವಹಿಸಲು ಸೂಚನೆ

17/05/2021

ಕೋಲಾರ,ಮೇ 17 (ಹಿ.ಸ) : ಹಳ್ಳಿಗಳಲ್ಲಿ ಜನತೆ ಕಡ್ಡಾಯವಾಗಿ ಕರೋನಾ  ಮುಂಜಾಗೃತ ಕ್ರಮಗಳನ್ನು (ಎಸ್‍ಎಂಎಸ್) ಪಾಲನೆ ಮಾಡುವಂತೆ ಗ್ರಾಮ ಪಂಚಾಯತಿ ಕಾರ್ಯಪಡೆ ಎಚ್ಚರ ವಹಿಸುವ ಜೊತೆಗೆ ಸ್ವಚ್ಛತೆಗೆ ಒತ್ತು ನೀಡಲು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ ಹೇಳಿದರು.

ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿ.ಡಿ.ಓ.ಗಳ ಜೊತೆ ಝೂಮ್ ಮೀಟಿಂಗ್ ನಡೆಸಿದರು. ಗ್ರಾಮಾಂತರ ಪ್ರದೇಶದಲ್ಲಿ ಆಟೋ ಮೂಲಕ ಪ್ರಚಾರ ನಡೆಯುತ್ತಿದ್ದರೂ ನಿರೀಕ್ಷಿತ ಮಟ್ಟಕ್ಕೆ ಪ್ರಯೋಜನ ಆಗುತ್ತಿಲ್ಲ. ಹಳ್ಳಿ ಜನತೆಯ ಮನೆ ಬಾಗಿಲಿಗೆ ಜಾಗೃತಿ ತಲುಪಿಸುವ ಮೂಲಕ ಕರೋನಾ ಸರಣಿಯನ್ನು ಕತ್ತರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಪಂಚಾಯತಿಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಜೂನ್ 15ರೊಳಗೆ ಕಾರ್ಯಾಚರಣೆ ಮಾಡುವಂತೆ ಕ್ರಮ ವಹಿಸಬೇಕು. ಕಸದ ಬುಟ್ಟಿ ಖರೀದಿ ಮಾಡದ ಪಿಡಿಓಗಳು ಒಂದು ವಾರದಲ್ಲಿ ಕೊಂಡುಕೊಳ್ಳಬೇಕಿದ್ದು ಇದಕ್ಕೆ ಲಾಕ್‍ಡೌನ್ ನೆಪ ಹೇಳಬಾರದು.  ಕಾರ್ಯಪಡೆ ಸಭೆ ಪಂಚಾಯತಿ ಮಟ್ಟದಲ್ಲಿ ಪ್ರತಿ ವಾರ ನಡೆಯುವ ಮೂಲಕ ಕೋವಿಡ್ ಸ್ಥಿತಿಗತಿ ಪರಿಶೀಲನೆ ನಡೆಸಬೇಕು. ಎರಡನೇ ಅಲೆ ಹಳ್ಳಿಗಳಲ್ಲಿ ಹೆಚ್ಚಿನ ಅವಾಂತರ ಸೃಷ್ಠಿ ಮಾಡುತ್ತಿದ್ದು ಜತೆಗೆ ಬ್ಲಾಕ್ ಫಂಗಸ್ ಕಾಟ ಹೆಚ್ಚಾಗಿದೆ ಎಂದು ತಿಳಿಸಿದರು.

ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬುದನ್ನು ಬಿಟ್ಟು ಪಂಚಾಯತಿ ಜನಪ್ರತಿನಿಧಿಗಳು ಕರೋನಾ ತಡೆಗೆ ಕೈ ಜೋಡಿಸಬೇಕು. ಮೊದಲು ಜನಪ್ರತಿನಿಧಿಗಳು ಎಸ್‍ಎಂಎಸ್ ಪಾಲನೆ ಮಾಡುವ ಮೂಲಕ ಸುರಕ್ಷಿತ ಜೀವನ ನಡೆಸುವುದರೊಂದಿಗೆ ಇತರರಿಗೆ ಮಾದರಿ ಆಗಬೇಕು. ಅಗತ್ಯವಿದ್ದಲ್ಲಿ ಪಂಚಾಯತಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡುವ ಮೂಲಕ ಸೋಂಕಿತರು ತಾಲೂಕು ಮಟ್ಟದ ಆಸ್ಪತ್ರೆಗೆ ಬಾರದಂತೆ ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, ಪಂಚಾಯತಿಯಿಂದ ಹಳ್ಳಿ ಮಟ್ಟದಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ 3ನೇ ಅಲೆ ಒಳಗಾಗಿ ಶೇ. 100 ಗುರಿ ಸಾಧನೆ ಮಾಡಬೇಕು. ಪಂಚಾಯತಿ ಮಟ್ಟದಲ್ಲಿ ಸೋಂಕಿನಿಂದ ಯಾವುದೇ ಸಾವು-ನೋವುಗಳಾಗದಂತೆ ನೋಡಿಕೊಳ್ಳಬೇಕಿದ್ದು ತಪ್ಪಿದಲ್ಲಿ ಸಂಬಂಧಿಸಿದ ಪಂಚಾಯತಿಯನ್ನು ನೇರ ಹೊಣೆ ಮಾಡಲಾಗುತ್ತದೆ. ಸೋಂಕಿತರನ್ನು ಸಮಾಜದಿಂದ ದೂರ ತಳ್ಳುವ ಕೆಲಸ ಆಗಬಾರದು ಎಂದು ಕಟ್ಟಪ್ಪಣೆ ಮಾಡಿದರು.

ತಾಲ್ಲೂಕು ಪಂಚಾಯತಿ ಇಒ ಎನ್.ವಿ. ಬಾಬು ಮಾತನಾಡಿ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಹತ್ತಾರು ಮಂದಿಗೆ ಸೋಂಕು ಹತ್ತುತ್ತಿರುವುದರಿಂದಾಗಿ ಕಡ್ಡಾಯವಾಗಿ ಕುಟುಂಬದ 5 ಜನ ಮಾತ್ರವೇ ಪಾಲ್ಗೊಳ್ಳುವಂತೆ ಎಚ್ಚರ ವಹಿಸಬೇಕು. ಲಕ್ಷಣಗಳು ಕಂಡ ತಕ್ಷಣ ಸೋಂಕಿತರ ಮನೆಗೇ ಔಷಧಗಳನ್ನು ಕಳುಹಿಸುವ ಮೂಲಕ ನೈತಿಕ ಮತ್ತು ಮಾನಸಿಕ ಧೈರ್ಯ ತುಂಬಬೇಕು. ನಿರ್ಗತಿಕರಿಗೆ ಮತ್ತು ದುರ್ಬಲ ವರ್ಗದವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಅಗತ್ಯ ಬಿದ್ದಲ್ಲಿ ಪಂಚಾಯತಿಯಿಂದ ಠರಾವು ಪಾಸ್ ಮಾಡುವ ಮೂಲಕ ಅಗತ್ಯವುಳ್ಳವರಿಗೆ ನೆರವು ನೀಡಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರಮ್ಯದೀಪಿಕಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿ.ಡಿ.ಓ ಗಳು ಝೂಮ್ ಮೀಟಿಂಗ್‍ನಲ್ಲಿ ಭಾಗವಹಿಸಿದ್ದರು.


 
Top