भारत

Blog single photo

ಪಂಚ ರಾಜ್ಯಗಳಲ್ಲಿ ಬಿಜೆಪಿ ಗಳಿಸಿದ್ದೇ ಹೆಚ್ಚು : ಸಿ.ಟಿ.ರವಿ ಸಂತಸ

03/05/2021

ಬೆಂಗಳೂರು : ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ ಎಂದು ಶೂನ್ಯ ಸಂಪಾದನೆಯಲ್ಲೂ ಸಂಭ್ರಮಿಸುವ ಮನಸ್ಥಿತಿಯನ್ನು ನಾನು ಕಾಂಗ್ರೆಸ್ ನಾಯಕರಲ್ಲಿ ಕಂಡಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ತಮಿಳುನಾಡು ರಾಜ್ಯದ ಉಸ್ತುವಾರಿಗಳೂ ಆದ ಸಿ.ಟಿ.ರವಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಈ 5 ರಾಜ್ಯಗಳ ಚುನಾವಣೆಯಲ್ಲಿ ಕಳೆದುಕೊಂಡದ್ದಕ್ಕಿಂತ ಗಳಿಸಿದ್ದೇ ಹೆಚ್ಚು. ಅಸ್ಸಾಂನಲ್ಲಿ ಸ್ಥಾನವನ್ನು ಸುಭದ್ರವಾಗಿ ಇಟ್ಟುಕೊಂಡು ಪಕ್ಷ ಅಧಿಕಾರಕ್ಕೆ ಬಂದಿದೆ...

...ಪಶ್ಚಿಮ ಬಂಗಾಳದಲ್ಲಿ 3 ಸ್ಥಾನದಿಂದ 77 ಸ್ಥಾನಕ್ಕೆ ಏರಿದೆ. 74 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದೇವೆ. ಮತ ಗಳಿಕೆಯಲ್ಲೂ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಮೈತ್ರಿಕೂಟವು ಹಿಂದೆ 66 ಸ್ಥಾನಗಳಿದ್ದವು. ಆ ಎರಡೂ ಪಕ್ಷಗಳು ಶೂನ್ಯ ಸಂಪಾದನೆ ಮಾಡಿವೆ ಎಂದು ತಿಳಿಸಿದರು.

ಪಾಂಡಿಚೇರಿಯಲ್ಲಿ ಮೊದಲನೇ ಬಾರಿ ಎನ್‍ಡಿಎ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಆರು ಸ್ಥಾನಗಳನ್ನು ಗೆದ್ದಿದೆ. ಎನ್‍ಆರ್ ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಮೊದಲು 15 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈಗ ಕೇವಲ ಎರಡು ಸ್ಥಾನ ಪಡೆದಿದೆ. ತಮಿಳುನಾಡಿನಲ್ಲಿ 2016ರಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಆದರೆ, ಇದರಿಂದ ನಮಗೆ ಸಮಾಧಾನವಾಗಿಲ್ಲ ಎಂದು ತಿಳಿಸಿದರು.

ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ಮತ ಗಳಿಕೆಯನ್ನು ನಾವು ಕಾಪಾಡಿಕೊಂಡಿದ್ದೇವೆ. ಕೇರಳದಲ್ಲಿ ಪರ್ಯಾಯವಾಗಿ ಅಧಿಕಾರಕ್ಕೆ ಬರುವ ಅವಕಾಶವನ್ನು ಎಡಬಿಡಂಗಿ ಕಾರಣಕ್ಕಾಗಿ ಕಾಂಗ್ರೆಸ್ ಕಳೆದುಕೊಂಡಿದೆ. ಪಾಂಡಿಚೇರಿಯಲ್ಲಿ ಇದ್ದ ಅಧಿಕಾರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಶೂನ್ಯ ಸಂಪಾದನೆ ಮಾಡಿದರು. ಹೀಗಿದ್ದೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದಾರೆ ಎಂದರು.

ಮಹಾರಾಷ್ಟ್ರದ ವಿಧಾನಸಭೆಯ ಒಂದು ಉಪ ಚುನಾವಣೆಯ ಸ್ಥಾನ ನಮ್ಮದಾಗಿದೆ. ಕರ್ನಾಟಕದಲ್ಲೂ ಒಂದು ಲೋಕಸಭೆ ಮತ್ತು ಒಂದು ವಿಧಾನಸಭಾ ಸ್ಥಾನ ನಮ್ಮದಾಗಿದೆ. ಒಂದು ವಿಧಾನಸಭೆ ಕ್ಷೇತ್ರವನ್ನು ಸೋತಿರುವುದು ಎಚ್ಚರಿಕೆಯ ಗಂಟೆ ಎಂದರು.

ಮೈಮರೆತರೆ ಕರ್ನಾಟಕದಲ್ಲಿ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂಬ ಸಂದೇಶವನ್ನು ಮತದಾರರು ಈ ಚುನಾವಣೆಯ ಮೂಲಕ ಕೊಟ್ಟಿದ್ದಾರೆ. ನಾವು ಆಂತರಿಕ ಅವಲೋಕನ ಮಾಡಿಕೊಳ್ಳಲು ಮತದಾರರ ಎಚ್ಚರಿಕೆ ಇದಾಗಿದೆ ಎಂದು ತಿಳಿಸಿದರು.

ತಮಿಳುನಾಡಿನ ನಾಗರಕೊಯಿಲ್‍ನಲ್ಲಿ ಅತ್ಯಂತ ಬಡವರಾದ, ಬರಿಗಾಲಿನಲ್ಲೇ ನಡೆಯುವ ಬಿಜೆಪಿಯ ಗಾಂಧಿ ಅವರು ವಿಧಾನಸಭೆ ಪ್ರವೇಶಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜನರ ವಿಶ್ವಾಸದ ಸಂಕೇತವಾಗಿದೆ ಎಂದು ಅವರು ವಿಶ್ಲೇಷಿಸಿದರು. 

ಪಶ್ಚಿಮ ಬಂಗಾಳದಲ್ಲೂ ಬಡತನದ ಹಿನ್ನೆಲೆ ಉಳ್ಳ ಚಂದನಾ ಭೌರಿ ಅವರು ಆಯ್ಕೆಯಾಗಿದ್ದು ಪ್ರಜಾಪ್ರಭುತ್ವದ ಮೌಲ್ಯಕ್ಕೆ ಜನರು ಕೊಟ್ಟ ಉಡುಗೊರೆ ಎಂದು ತಿಳಿಸಿದರು.

ಬಿಜೆಪಿ ಒಂದು ಸೈದ್ಧಾಂತಿಕ ಹಿನ್ನೆಲೆ ಇರುವ ಪಕ್ಷ. ಯಾವುದೇ ಚುನಾವಣೆಯು ನಮಗೆ ಅಂತಿಮವಲ್ಲ. ಈ ಸಾಧನೆ ನಮಗೆ ಅಂತಿಮವಲ್ಲ. ಪಂಚರಾಜ್ಯದ ಸಾಧನೆ ನಮಗೆ ಆರಂಭ ಅಷ್ಟೇ ಎಂದು ಅವರು ನುಡಿದರು. 

ಸ್ಥಾನಗಳನ್ನು ಕಳಕೊಂಡ ಕಾಂಗ್ರೆಸ್ಸಿಗರು 2016 ಮತ್ತು 2021ರ ಚುನಾವಣೆ ಫಲಿತಾಂಶವನ್ನು ತುಲನೆ ಮಾಡಿಕೊಳ್ಳಲಿ ಎಂದು ಅವರು ಆಗ್ರಹಿಸಿದರು.

ಚಾಮರಾಜನಗರದ ದುರಂತ ಘೋರ ಅನ್ಯಾಯ. ಈ ದುರಂತಕ್ಕೆ ಯಾರೇ ಹೊಣೆ ಆಗಿದ್ದರೂ ಅವರ ಮೇಲೆ ಕಠಿಣ ಕ್ರಮ ಆಗಲೇಬೇಕು. ದೆಹಲಿ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಆಗುತ್ತಿದ್ದ ದುರಂತ ನಮ್ಮ ರಾಜ್ಯದಲ್ಲೇ ಆಗಿರುವುದು ದುರ್ದೈವದ ಸಂಗತಿ ಎಂದು ಅವರು ತಿಳಿಸಿದರು.

ಜವಾಬ್ದಾರಿ ಹೊತ್ತವರು ಎಷ್ಟು ಎಚ್ಚರ ವಹಿಸಬೇಕಿತ್ತೋ ಅಷ್ಟು ವಹಿಸಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಈ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಅವರು ಮನವಿ ಮಾಡಿದರು. ವಿಷಯ ತಿಳಿದು ಮುಖ್ಯಮಂತ್ರಿಗಳನ್ನು ಕಂಡು ಮಾತನಾಡಿದ್ದೇನೆ ಮತ್ತು ಆಮ್ಲಜನಕ ಸರಬರಾಜಿನಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇನೆ ಎಂದರು.

ಜಿಲ್ಲೆಯ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ತಿಳಿಸಿದರು. 

ಇಂಥ ಘಟನೆಗಳು ಮರುಕಳಿಸದಂತೆ ಎಲ್ಲಾ ಜಿಲ್ಲೆಗಳಲ್ಲಿ ಮೇಲ್ವಿಚಾರಣಾ ವ್ಯವಸ್ಥೆ ಮಾಡುವಂತೆ ಅವರು ವಿನಂತಿಸಿದರು. ಬೇರೆ ರಾಜ್ಯಗಳ ದುರ್ಘಟನೆಗಳು ನಮಗೆ ಎಚ್ಚರಿಕೆ ಗಂಟೆ ಆಗಬೇಕಿತ್ತು. ಹಾಗಾಗದ ಕಾರಣ 24 ಜನರು ಬಲಿ ಆಗಿರುವುದು ಬೇಸರ ತಂದಿದೆ ಎಂದರು. ಇದು ಯಾವ ದೃಷ್ಟಿಯಲ್ಲೂ ಕ್ಷಮೆಗೆ ಅರ್ಹ ಘಟನೆಯಲ್ಲ ಎಂದು ತಿಳಿಸಿದರು.

ಆಮ್ಲಜನಕದ ಸರಬರಾಜಿನ ವಿಚಾರದಲ್ಲಿ ಸರಕಾರ ಮಧ್ಯ ಪ್ರವೇಶಿಸಬೇಕು. ಇದು ಆರೋಗ್ಯ ತುರ್ತು ಪರಿಸ್ಥಿತಿಯ ಕಾಲ ಎಂದು ಘೋಷಿಸಿ ಮತ್ತು ಸಮರೋಪಾದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕೋರಿದರು. 

ನಾನು ಏಪ್ರಿಲ್ 30ರಂದು ಒಂದಷ್ಟು ವಿವರಗಳೊಂದಿಗೆ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದೇನೆ. ಕೋರ್ಸ್ ಮುಗಿಸಿ ಸರ್ಟಿಫಿಕೇಟ್ ಸಿಗದ 7 ಸಾವಿರ ಎಂಬಿಬಿಎಸ್ ವೈದ್ಯರ ಸೇವೆಯ ಬಳಕೆ, ಅರೆ ವೈದ್ಯಕೀಯ ಸಿಬ್ಬಂದಿ ಹೆಚ್ಚಳ, ಟೆಲಿ ಮೆಡಿಸಿನ್ ವ್ಯವಸ್ಥೆ, ಒಒಡಿ ಮೇಲೆ ಇರುವವರನ್ನು ವಾಪಸ್ ಕರೆಸಿಕೊಳ್ಳುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದೇನೆ. ಅವುಗಳಲ್ಲಿ ಕೆಲವು ಈಗಾಗಲೇ ಅನುಷ್ಠಾನಗೊಂಡಿವೆ ಎಂದರು.

ಇದೇ ಮಾದರಿಯ ಘಟನೆಗಳು ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ಆಗಿವೆ. ಅಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆಯೇ, ರಾಜ್ಯದ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ರಾಜೀನಾಮೆಯಿಂದ ಆ ರೋಗಿಗಳು ಎದ್ದು ಬರಲು ಸಾಧ್ಯವೇ ಎಂದು ಸಿ.ಟಿ.ರವಿ ಅವರು, ಸಿಎಂ- ಆರೋಗ್ಯ ಸಚಿವರ ರಾಜೀನಾಮೆ ಕುರಿತಂತೆ ಸಿದ್ದರಾಮಯ್ಯ ಅವರ ಆಗ್ರಹ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ನಮಗೆ ಜನರ ಬದುಕಿಗಿಂತ ಅಧಿಕಾರ ದೊಡ್ಡದೆಂದು ನಾವಂತೂ ಭಾವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.


 
Top