क्षेत्रीय

Blog single photo

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಉತ್ಸವಕ್ಕೆ ಅದ್ದೂರಿ ಚಾಲನೆ

08/10/2019


ಮೈಸೂರು, ಅ.08 (ಹಿ.ಸ) - ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಬಣ್ಣಗಳ ಚಿತ್ತಾರದಿಂದ ಅಲಂಕೃತನಾದ ಅರ್ಜುನ ಆನೆ ಮೇಲೆ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ನೋಡುಗರ ಕಣ್ಮನ ಸೆಳೆಯಿತು. ನಗರ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆವರಣಿಗೆ ವೇಳೆ ಜನರು ದೇವಿಯ ದರ್ಶನ ಪಡೆದ ಭಕ್ತರು ಭಕ್ತಿ ಸಮರ್ಪಿಸಿದರು. 
ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿಡಲಾದ  ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪನಮನ ಸಲ್ಲಿಸುವ ಮೂಲಕ ಐತಿಹಾಸಿಕ ಜಂಬೂಸವಾರಿಗೆ ಚಾಲನೆ ನೀಡಿದರು.  ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತ ಆನೆ ಅರ್ಜುನ ಗಜ ಗಾಂಭೀರ್ಯದಿಂದ ಹೆಜ್ಜೆಹಾಕುತ್ತಿದ್ದಾನೆ. ಆತನ ಅಕ್ಕ-ಪಕ್ಕ ಮತ್ತು ಹಿಂದೆ ಬಣ್ಣಗಳಿಂದ ಸಿಂಗಾರಗೊಂಡ ಆನೆಗಳು ಹೆಜ್ಜೆ ಹಾಕುತ್ತಿವೆ. ತಾಯಿ ಚಾಮುಂಡೇಶ್ವರಿಗೆ ಜೈಕಾರ ಹಾಕುತ್ತಾ ಮೈಸೂರಿನ ಜನರು ಸಂಭ್ರಮದಿಂದ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ರಾಜವಂಶಸ್ಥ ಯಧುವೀರ್ ಅವರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಬಳಿಕ  ನಿಶಾನೆ, ನೌಪತ್ ಅನೆಗಳು ಮೆರವಣಿಗೆ ಹೊರಟಿದ್ದು, ಜಾನಪದ ಕಲಾತಂಡಗಳೊಂದಿಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ಕಣ್ಮನ ಸೆಳೆಯುತ್ತಿವೆ. 
ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಶಿಶಿಲ ಬೆಟ್ಟ, ಬಳ್ಳಾರಿ ಜಿಲ್ಲೆಯ 'ಹಂಪಿಯ ವಾಸ್ತುಶಿಲ್ಪ ಕಲಾ ವೈಭವ' ಮಂಡ್ಯ ಜಿಲ್ಲೆಯ 'ಆದಿ ಚುಂಚನಗರಿ ಮಠ 'ಬೆಂಗಳೂರು ನಗರ ಜಿಲ್ಲೆಯ ಚಂದ್ರಯಾನ-2, ದಾವಣಗೆರೆಯ ಏರ್ ಸ್ಟೈಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ, ಹಾಸನ ಜಿಲ್ಲೆಯ ಎತ್ತಿನ ಹೊಳೆ,  ಗದಗ ಜಿಲ್ಲೆಯ ಹೆಣ್ಣು ಮಗು ರಕ್ಷಿಸಿ,  ಮೈಸೂರು ಜಿಲ್ಲೆಯ ಜಿಎಸ್ ಎಸ್ ಮಠದಿಂದ ಸಮಾಜಕ್ಕೆ ಕೊಡುಗೆ, ಚಿಕ್ಕಮಗಳೂರು ಜಿಲ್ಲೆಯ ರೇಷ್ಮೆ ಮತ್ತು ಎಚ್ ನರಸಿಂಹಯ್ಯ ಸ್ತಬ್ಧಚಿತ್ರ,  ಚಾಮರಾಜನಗರ ಜಿಲ್ಲೆಯ 'ಸಮೃದ್ದಿ ಸಂಪತಿನ ನಡುವೆ ಹುಲಿಯ ಸಂತೃಪ್ತ ತಾಣ' ದಕ್ಷಿಣ ಕನ್ನಡ ಜಿಲ್ಲೆಯ 'ಮಂಗಳಾದೇವಿ'  ಬಾಗಲಕೋಟೆಯ ಅತಿವೃಷ್ಠಿ . ಹಾಸನ ಜಿಲ್ಲೆಯ ಎತ್ತಿನಹೊಳೆ ಯೋಜನೆ ಕುರಿತಾದ ಸ್ತಬ್ಧಚಿತ್ರ,  ಹಾವೇರಿ ಜಿಲ್ಲೆಯ ಶಂಖನಾದ ಮೊಳಗಿಸುತ್ತಿರುವ ಕನಕದಾಸರು , ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ವೈಭವ ಸಾರುವ ಸ್ತಬ್ಧ ಚಿತ್ರ ಸೇರಿದಂತೆ ಪ್ರತಿಯೊಂದು ಜಿಲ್ಲೆಯ 38  ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ನಾಡಿನ, ಕಲೆ, ಸಂಸ್ಕೃತಿಯನ್ನು ಅನಾವರಣ ಮಾಡಿದವು. ಇದೇ ವೇಳೆ  ಜಗ್ಗಲಗೆ ಮೇಳ, ಗೊರವರ ಕುಣಿತ, ಪೂಜಾ ಕುಣಿತ, ಚಂಡೆ ಮೇಳ, ತಮಟೆ ವಾದನ ಮತ್ತಿತರೆ ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡುತ್ತಿವೆ.  ಸಂಜೆ ಹೊತ್ತಿಗೆ ಬನ್ನಿ ಮಂಟಪ ತಲುಪುವ ಜಂಬೂ ಸವಾರಿ ಬಳಿಕ ಅಲ್ಲಿ ಬನ್ನಿ ಕಡಿಯುವ ಮೂಲಕ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.  


 
Top