आर्थिक

Blog single photo

ಟೊಮ್ಯೊಟೊ ಬೆಳೆಗೆ ನ್ಯಾಯಯುತವಾದ ಬೆಂಬಲ ಬೆಲೆಯನ್ನು ಒದಗಿಸಿ

17/05/2021

ಕೋಲಾರ,ಮೇ 17 (ಹಿ.ಸ) : ಕರೋನಾ ಸಂಕಷ್ಟದ ಈ ವೇಳೆ ಬಹಳಷ್ಟು ಉತ್ಪಾದಕ ವಲಯಗಳು ತೊಂದರೆ ಅನುಭವಿಸುತ್ತಿರುವಂತೆ ಕೃಷಿ ವಲಯವೂ ಕೂಡಾ ತೊಂದರೆಗೆ ಸಿಲುಕಿದೆ. ಅದರಲ್ಲೂ ಹೆಚ್ಚು ಪ್ರಮಾಣದಲ್ಲಿ ಟೊಮ್ಯಾಟೊ ಹಣ್ಣನ್ನು ಬೆಳೆದ ನಮ್ಮ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ರೈತರು ಸರಿಯಾದ ಬೆಂಬಲ ಬೆಲೆ ಸಿಗದೆ ಉತ್ತಮವಾಗಿ ಬಂದ ಫಸಲನ್ನು ರಸ್ತೆಗೆ ಸುರಿದು ಹೋಗುತ್ತಿದ್ದು ಬಹಳಷ್ಟು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ ಅವರು ತಿಳಿಸಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಹಣ್ಣನ್ನು ಬೆಳೆಯುತ್ತಿರುವ ರೈತರಿಗೆ ಒಂದು ಎಕರೆ ಬೆಳೆ ಬೆಳೆಯಲು ಸುಮಾರು 1.50 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಣವು ಖರ್ಚಾಗುತ್ತದೆ. ಆದರೆ ಈಗಿನ ಮಾರುಕಟ್ಟೆ ದರದ ಅನ್ವಯ ಬೆಳೆಯನ್ನು ಬೆಳೆದ ವೆಚ್ಚವೂ ಸಹ ಕೈಸೇರುತ್ತಿಲ್ಲ. ಮುಳಬಾಗಿಲು ಕ್ಷೇತ್ರದ ವಡ್ಡಹಳ್ಳಿ ಮಾರುಕಟ್ಟೆಗೆ ಪ್ರತಿದಿನವೂ 40 ಸಾವಿರಕ್ಕೂ ಹೆಚ್ಚಿನ ಟೊಮ್ಯಾಟೊ ಕ್ರೇಟ್‍ಗಳು ಹರಾಜಿಗೆ ಬರುತ್ತಿದ್ದರೂ ಕೂಡಾ ಸರಿಯಾದ ಬೆಂಬಲ ಬೆಲೆಯು ದೊರೆಯದ ಕಾರಣಕ್ಕೆ ರೈತರು ನಿರಾಸೆಯಿಂದ ಬೆಳೆಯನ್ನು ರಸ್ತೆಗೆ ಸುರಿಯುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.

ಈ ಸಮಸ್ಯೆಯಿಂದ ಕೇವಲ ಮುಳಬಾಗಿಲು ಕ್ಷೇತ್ರದ ರೈತರಿಗೆ ಮಾತ್ರ ಸಂಕಷ್ಟ ಅನುಭವಿಸುತ್ತಿಲ್ಲ ಇಡೀ ಕೋಲಾರ ಜಿಲ್ಲೆಯ ರೈತ ಬಾಂಧವರೂ ಕೂಡಾ ಟೊಮ್ಯಾಟೊ ಬೆಳೆಗೆ ಬೆಂಬಲ ಬೆಲೆ ಸಿಗದೇ ಸಂಕಷ್ಟದಲ್ಲಿದ್ದು ಸಾಲ ಸೂಲದ ಆತಂಕವನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಟೊಮ್ಯಾಟೊ ಬೆಳೆಗೆ ನ್ಯಾಯಯುತವಾದ ಬೆಂಬಲ ಬೆಲೆಯನ್ನು ಒದಗಿಸುವ ಮೂಲಕ ರೈತರ ಬದುಕಿಗೆ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.




                                                   


 
Top