राष्ट्रीय

Blog single photo

ಪ್ರಿಯಾಂಕಾ ರೆಡ್ಡಿ ಹತ್ಯೆ ಪ್ರಕರಣ, ಆರೋಪಿಗಳ ಪರ ವಕಾಲತ್ತು ಇಲ್ಲ - ವಕೀಲರ ಸಂಘ

30/11/2019


ಹೈದರಾಬಾದ್​, ನ.30 (ಹಿ.ಸ) -  ನಿರ್ಭಯಾ ಪ್ರಕರಣದ ಬಳಿಕ ಇಡೀ ದೇಶಾದ್ಯಂತ ಸಂಚಲನ ಮೂಡಿಸಿರುವ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ವಕೀಲರ ಸಂಘ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದೆ.
ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ಹಾಗು ಸೆಲೆಬ್ರಿಟಿಗಳಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಪಂಕ್ಚರ್ ಆಗಿದ್ದ ಸ್ಕೂಟರ್​ ಟೈರ್​ ರಿಪೇರಿ ಮಾಡಿಕೊಡ್ತೀವಿ ಅಂತ ಬಂದ ಕಿರಾತಕರು ಪ್ರಿಯಾಂಕಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಮೃತದೇಹವನ್ನು ಭೀಕರವಾಗಿ ಸುಟ್ಟುಹಾಕಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.  ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳಾದ ಮೊಹಮ್ಮದ್​ ಅರೀದ್​, ಜೊಲ್ಲು ಶಿವ, ಜೊಲ್ಲು ನವೀನ್ ಹಾಗು ಚಿಂತಾಕುಂಟ ಚೆನ್ನಕೇಶವುಲು ರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಆರೋಪಿಗಳಿಗೆ ವಕೀಲರು ಕೂಡ ಶಾಕ್ ನೀಡಿದ್ದು, ವಕೀಲರು ಕೂಡ ಆರೋಪಿಗಳ ಪರ ವಾದ ಮಾಡದಿರಲು ನಿರ್ಧರಿಸಿದ್ದಾರೆ. ಈ ಆರೋಪಿಗಳಿಗೆ ಯಾವುದೇ ರೀತಿಯ ಕಾನೂನು ಬೆಂಬಲ ನೀಡಲ್ಲ ಅಂತ ಶಾದ್​ನಗರದ ಲಾಯರ್ಸ್ ಬಾರ್​​ ಅಸೋಸಿಯೇಷನ್​ ನಿರ್ಧರಿಸಿದೆ. ಪ್ರಿಯಾಂಕಾ ಮೇಲೆ ಸಾಮೂಹಿಕ  ಅತ್ಯಾಚಾರ ನಡೆದಿರುವುದನ್ನು ಸೈಬರಾಬಾದ್​ ಪೊಲೀಸರು ದೃಢಪಡಿಸಿದ್ದಾರೆ. ಅಲ್ಲದೆ, ಆರೋಪಿಗಳು ಪ್ರೀ ಪ್ಲ್ಯಾನ್ ಕೃತ್ಯವೆಸಗಿದ್ದಾರೆ. ವೈದ್ಯೆ ಮೇಲೆ ಅತ್ಯಾಚಾರವೆಸಗಿದ ನಂತರ ಸೀಮೆಎಣ್ಣೆ ಸುರಿದ ಬ್ಲಾಂಕೆಟ್​ ಆಕೆಯ ಮೇಲೆ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಶಾದ್​ನಗರದ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. 


 
Top